ಬೆಂಗಳೂರು: ಇನ್ಮುಂದೆ ಬೆಂಗಳೂರಿಗರು ಆನ್ ಲೈನ್ ಮೂಲಕವೇ ಕಟ್ಟಡ ನಕ್ಷೆ ಮಂಜೂರಾತಿ ಪಡೆದುಕೊಳ್ಳಬಹುದು. ಇಂತದ್ದೊಂದು ಮಹತ್ವದ ಯೋಜನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆರಂಭವಾಗಿದೆ.
ಬೆಂಗಳೂರು ನಗರದ ಜನರಿಗೆ ಕಟ್ಟಡ ನಕ್ಷೆ ಮಂಜೂರಾತಿ ವಿಚಾರದಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ʼನಂಬಿಕೆ ನಕ್ಷೆʼ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಜನರೇ ತಮ್ಮ ಕಟ್ಟಡ ನಕ್ಷೆಯನ್ನು ಅನುಮೋದಿತ ಕಟ್ಟಡ ವಿನ್ಯಾಸಕಾರರು ಅಥವಾ ಎಂಜಿನಿಯರ್ ಗಳ ಬಳಿ ಅನುಮೋದಿಸಿಕೊಂಡು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳುವ ಯೋಜನೆ ಇದಾಗಿದೆ. 50/80 ವಿಸ್ತೀರ್ಣದ ವರೆಗಿನ ನಿವೇಶನಗಳಿಗೆ ಈ ಯೋಜನೆ ಅನ್ವಯವಾಗಲಿದೆ ಎಂದು ತಿಳಿಸಿದರು.
ಬಿಡಿಎ, ಗೃಹನಿರ್ಮಾಣ ಸಂಘದವರು 50/80 ವಿಸ್ತೀರ್ಣದ ವರೆಗಿನ ನಿವೇಶನಗಳನ್ನೇ ಹೆಚ್ಚಾಗಿ ಅಭಿವೃದ್ಧಿಪಡಿಸಿರುತ್ತಾರೆ. ಇಷ್ಟು ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಾಣ ಹಾಗೂ ನವೀಕರಣಕ್ಕೆ ಜನರು ಯಾವುದೇ ತೊಂದರೆಯಿಲ್ಲದೇ ಮುಂದಾಗಬಹುದು. ಅನುಮೋದಿತ ಲೆಕ್ಕ ಪರಿಶೋದಕರಂತೆ ಅನುಮೋದಿತ ಎಂಜಿನಿಯರ್ ಗಳು ಹಾಗೂ ಕಟ್ಟಡ ವಿನ್ಯಾಸಕಾರರ ಮೂಲಕ ತಾತ್ಕಾಲಿಕ ಕಟ್ಟಡ ನಕ್ಷೆಗೆ ಅನುಮತಿ ನೀಡಲಾಗುವುದು. ನಂತರ ಪಾಲಿಕೆಯ ಎಂಜಿನಿಯರ್ ಗಳು ಪರಿಶೀಲನೆ ನಡೆಸುತ್ತಾರೆ ಎಂದರು.
ಮೊದಲು ಬಿಬಿಎಂಪಿಯ 2 ವಲಯಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಯಶಸ್ವಿಯಾಗಿ ಜಾರಿಯಾದ ಈ ಯೋಜನೆಯ ಸಾಧಕ ಭಾದಕಗಳನ್ನು ಸರಿಪಡಿಸಿ ಪ್ರಸ್ತುತ ಬಿಬಿಎಂಪಿಯ ಎಲ್ಲಾ ವಲಯಗಳಿಗೆ ವಿಸ್ತರಿಸಲಾಗುತ್ತಿದೆ. ಇದರಿಂದ ಜನರು ಪಾಲಿಕೆಗೆ ಅಲೆಯುವುದು ತಪ್ಪುತ್ತದೆ ಎಂದು ಹೇಳಿದರು.