ಪಾಟ್ನಾ: ಬಿಹಾರದ ಬೇಗುಸರಾಯ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸಚಿವರ ‘ಜನತಾ ದರ್ಬಾರ್(ಸಾರ್ವಜನಿಕ ಕುಂದುಕೊರತೆ ನಿವಾರಣಾ ಕಾರ್ಯಕ್ರಮ)ಕ್ಕೆ ಮನವಿಯೊಂದಿಗೆ ಬಂದಿದ್ದ ಆರೋಪಿ ಹಲ್ಲೆಗೆ ಯತ್ನಿಸಿದ್ದು, ಘಟನೆಯ ನಂತರ ಸಿಂಗ್ ಬೆಂಬಲಿಗರು ಥಳಿಸಿದ್ದಾರೆ.
ಸೈಫಿ ಎಂದು ಗುರುತಿಸಲಾದ ವ್ಯಕ್ತಿ ಅವರ ಅರ್ಜಿಯನ್ನು ಪರಿಶೀಲಿಸುವಂತೆ ಕೇಳಿಕೊಂಡರು. ಕಾರ್ಯಕ್ರಮ ಮುಗಿದಿದೆ ಎಂದು ಹೇಳಿದಾಗ ವ್ಯಕ್ತಿ ತನ್ನ ವಿರುದ್ಧ ಘೋಷಣೆಗಳನ್ನು ಕೂಗಿದ ಎಂದು ಸಿಂಗ್ ಹೇಳಿದ್ದಾರೆ.
ಗಡ್ಡಧಾರಿಯು ಮೌಲ್ವಿಯಂತೆ ವೇಷಭೂಷಣದೊಂದಿಗೆ ನನ್ನ ಬಳಿಗೆ ಬಂದು ಮನವಿ ಸ್ವೀಕರಿಸಲು ನನ್ನನ್ನು ಕೇಳಿದರು, ನಾನು ಅವರಿಗೆ ‘ಜಂತಾ ದರ್ಬಾರ್’ ಮುಗಿದಿದೆ. ಸರಿಯಾದ ಸಮಯಕ್ಕೆ ಬರಬೇಕು ಎಂದು ಹೇಳಿದಾಗ ಅವರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಒಂದು ಹಂತದಲ್ಲಿ ಅವರು ನನ್ನ ವಿರುದ್ಧ ದೈಹಿಕವಾಗಿ ದಾಳಿ ಮಾಡುವಂತೆ ವರ್ತಿಸಿದರು. ಅಲ್ಲಿ ನೆರೆದಿದ್ದ ಜನರು ಅವರನ್ನು ಹಿಮ್ಮೆಟ್ಟಿಸಿದ್ದು, ನಂತರ ಅವರನ್ನು ಪೊಲೀಸರಿಗೆ ಒಪ್ಪಿಸಲಾಯಿತು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಬೇಗುಸರೈ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಮನೀಶ್ ಮಾತನಾಡಿ, ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತ ಪೊಲೀಸ್ ವಶದಲ್ಲಿದ್ದಾನೆ. ಶನಿವಾರ ಮಧ್ಯಾಹ್ನ ಬಲ್ಲಿಯಾ ಉಪವಿಭಾಗದಲ್ಲಿ ಕೇಂದ್ರ ಸಚಿವರ ಕಾರ್ಯಕ್ರಮವಿತ್ತು. ಈ ವೇಳೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದು, ಭದ್ರತಾ ಪಡೆಗಳಲ್ಲಿದ್ದ ಪೊಲೀಸರು ಆತನನ್ನು ಹಿಡಿದು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ವ್ಯಕ್ತಿಯ ಹೆಸರು ಶಹಜಾದ್ ಅಲಿಯಾಸ್ ಸೈಫಿ. ಈತ ಅಸಭ್ಯವಾಗಿ ವರ್ತಿಸಿ ಭದ್ರತಾ ಸರಂಜಾಮು ಮುರಿಯಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈತ ಬಲ್ಲಿಯಾ ನಿವಾಸಿಯಾಗಿದ್ದು, ವಾರ್ಡ್ ಕೌನ್ಸಿಲರ್ ಎಂದು ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.