ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲ್ ನಲ್ಲಿ ದರ್ಬಾರ್ ಮಾಡಿದ್ದ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಸಮಯ ಕಳೆಯಲು ಪುಸ್ತಕಗಳ ಮೊರೆ ಹೋಗಿದ್ದಾರೆ.
ಜೈಲಿಗೆ ಬರುವಾಗ ಎರಡು ಬ್ಯಾಗ್ ಪುಸ್ತಕಗಳೊಂದಿಗೆ ಅವರು ಬಂದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ 20ಕ್ಕೂ ಹೆಚ್ಚು ಪುಸ್ತಕ ತಂದಿದ್ದರು. ಕೆಲವು ಪುಸ್ತಕಗಳನ್ನು ದರ್ಶನ್ ಅವರಿಗೆ ಕುಟುಂಬದವರು, ಸ್ನೇಹಿತರು ನೀಡಿದ್ದರು. ಸಮಯ ಕಳೆಯಲು ಅವರು ಪುಸ್ತಕದ ಮೊರೆ ಹೋಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಪುಸ್ತಕಗಳನ್ನು ತಂದಿರುವ ಅವರು ಓದತೊಡಗಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಮೊದಲ ದಿನ ಕಳೆದ ಅವರು ಬೆಳಗ್ಗೆ ಉಪ್ಪಿಟ್ಟು ತಿಂದಿದ್ದಾರೆ. ಜೈಲಿನಲ್ಲಿ ಅವರಿಗೆ ತಟ್ಟೆ, ಲೋಟ, ಚೊಂಬು, ಹೊದಿಕೆ, ಚಾಪೆ ನೀಡಲಾಗಿದೆ ಎನ್ನಲಾಗಿದೆ.