ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಿದೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲಾಗಿದೆ.
ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ನಕಲಿ ಸಹಿ ವಿಚಾರವಾಗಿ ದೂರು ದಾಖಲಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿ ಹಾಗೂ ಕಡತ ನಾಶದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪಾರ್ವತಿ ಅವರು ಬರೆದಿರುವ ಮೂಲ ಪತ್ರ ನಾಶ ಮಾಡಿ ಇತ್ತೀಚೆಗೆ ಸೃಷ್ಟಿಸಿರುವ ಪತ್ರವನ್ನು ಕಡತಕ್ಕೆ ಸೇರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆಯ ವೈಟ್ನರ್ ಹಿಂದಿನ ಅಕ್ಷರಗಳೇನು ಎಂಬ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದರು. ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಎಂಬ ಅಕ್ಷರಗಳ ಮೇಲೆ ವೈಟ್ನರ್ ಹಾಕಲಾಗಿತ್ತು. ಈಗ ಆ ಮೂಲ ಪತ್ರ ತೋರಿಸಿರುವ ಬಗ್ಗೆ ದೂರು ದಾಖಲಾಗಿದೆ. ಪತ್ರದಲ್ಲಿ ಪಾರ್ವತಿ ಅವರ ಸಹಿ ಹಾಗೂ ಮಾಹಿತಿ ಹಕ್ಕಿನಲ್ಲಿ ಪಡೆದ ಪತ್ರದಲ್ಲಿರುವ ಸಹಿ ಬದಲಾವಣೆ ಇದೆ. ಈ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ದೂರು ನೀಡಲಾಗಿದೆ.