ಬೆಂಗಳೂರು: ರಾಜಸ್ಥಾನದಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ಸೋನಿಯಾ ಗಾಂಧಿ ಯಾವ ರಾಜ್ಯದಲ್ಲಿ ಜನಿಸಿದವರು ಎಂಬುದನ್ನು ತಿಳಿಸುತ್ತೀರಾ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕುಟುಂಬದವರನ್ನು ಒಳಗೊಂಡ ಟ್ರಸ್ಟ್ ಗೆ ಕೆಐಎಡಿಬಿ ಭೂ ಮಂಜೂರಾತಿ ಬಗ್ಗೆ ಪ್ರಶ್ನಿಸಿದ್ಧಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಸ್ನೇಹಿತರು ನನ್ನ ಮೇಲೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ನನ್ನನ್ನು ರಾಜಸ್ಥಾನಿ ಎಂದು ಕುಹಕವಾಡಿದ್ದಾರೆ. ನೆಹರು ಕುಟುಂಬ ಉತ್ತರ ಪ್ರದೇಶದಿಂದ ಬಂದಿದೆಯೇ? ನಾನು ರಾಜಸ್ಥಾನಿಯಾಗಿರುವುದು ಅಪರಾಧವೇ ಎಂದು ಲೆಹರ್ ಸಿಂಗ್ ಪ್ರಶ್ನಿಸಿದ್ದು, ರಾಜಸ್ಥಾನವೇನು ಪಾಕಿಸ್ತಾನದಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
59 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಿದ್ದು, ಇಲ್ಲಿಯೇ ಕೆಲಸ ಮಾಡುತ್ತಿದ್ದೇನೆ. ನಾನು ಕನ್ನಡ ಮಾತನಾಡುತ್ತೇನೆ, ಓದುತ್ತೇನೆ, ಬರೆಯುತ್ತೇನೆ. ರಾಜ್ಯ ಬಿಜೆಪಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಪಕ್ಷದಿಂದ ವಿಧಾನ ಪರಿಷತ್ ಸದಸ್ಯನಾಗಿದ್ದೆ. ಈಗ ರಾಜ್ಯಸಭೆ ಸದಸ್ಯನಾಗಿದ್ದೇನೆ. ನಾನು ಜೂನಿಯರ್ ಖರ್ಗೆ ಮತ್ತು ರಾಹುಲ್ ಅವರಂತೆ ಕುಟುಂಬ ರಾಜಕಾರಣದಿಂದ ಬಂದವನಲ್ಲ ಎನ್ನುವ ಹೆಮ್ಮೆ ಇದೆ ಎಂದು ತಿರುಗೇಟು ನೀಡಿದ್ದಾರೆ.