ಬೆಂಗಳೂರು: ಮುಡಾ ವಿಚಾರದಲ್ಲಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ, ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವ ಎದುರಾಳಿಗಳ ಕುಟಿಲ ಕಾರಸ್ಥಾನವನ್ನು ಅರ್ಥಮಾಡಿಕೊಂಡು ನೈತಿಕವಾಗಿ ನನ್ನ ಬೆಂಬಲಕ್ಕೆ ನಿಂತಿರುವ ಸ್ವಾಮೀಜಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಭೇಟಿಯಾದ ವಿವಿಧ ಮಠಗಳ ಸ್ವಾಮೀಜಿಗಳೊಂದಿಗೆ ಸಿಎಂ ಸಮಾಲೋಚನೆ ನಡೆಸಿದ್ದು, ಬೆಂಬಲಕ್ಕಾಗಿ ಧನ್ಯವಾದ ಹೇಳಿದ್ದಾರೆ.
ಕನಕ ಪೀಠ ಕಾಗಿನೆಲೆಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿ, ಕುಂಚಿಟಿಗ ಮಾಸಂಸ್ಥಾನ ಮಠ ಹೊಸದುರ್ಗದ ಶ್ರೀ ಶಾಂತವೀರ ಮಹಾಸ್ವಾಮಿಗಳು, ಭೋವಿ ಗುರುಪೀಠ ಚಿತ್ರದುರ್ಗದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು, ಮಾದಾರ ಚನ್ನಯ್ಯ ಗುರುಪೀಠ ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಗಳು, ಭಗೀರಥ ಪೀಠ ಮಧುರೆಯ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು, ಕನಕ ಗುರುಪೀಠ ಹೊಸದುರ್ಗದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ನಾರಾಯಣ ಗುರುಪೀಠ ಶಿವಮೊಗ್ಗದ ಶ್ರೀ ರೇಣುಕಾನಂದ ಸ್ವಾಮಿಗಳು, ಮಡಿವಾಳ ಗುರುಪೀಠ ಚಿತ್ರದುರ್ಗದ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು, ಹಡಪದ ಅಪ್ಪಣ್ಣ ಗುರುಪೀಠ ತಂಗಡಗಿಯ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮಿಗಳು, ಸರೂರು ವಿಜಯನಗರದ* ಶ್ರೀ ಶಾಂತಮ್ಮಯ್ಯ ಸ್ವಾಮೀಜಿಗಳು ಸಿಎಂ ಭೇಟಿಯಾಗಿ ಬೆಂಬಲ ನೀಡಿದ್ದಾರೆ.
ಮೇಲ್ನೋಟಕ್ಕೆ ಮುಡಾ ವಿಚಾರ ಇದು ರಾಜಕೀಯ ಸಂಘರ್ಷವೆನಿಸಿದರೂ ಆಂತರ್ಯದಲ್ಲಿ ಹಿಂದುಳಿದ ಜಾತಿಗೆ ಸೇರಿದ ನಾಯಕನೊಬ್ಬನ ಏಳಿಗೆ ಸಹಿಸದ ಪಟ್ಟಭದ್ರರು ಕುತಂತ್ರದಿಂದ ಹೆಣೆದ ಷಡ್ಯಂತ್ರ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯ. ಬುದ್ಧ, ಬಸವ, ಬಾಬಾ ಸಾಹೇಬ್, ಕನಕದಾಸರು, ನಾರಾಯಣ ಗುರುಗಳ ಆಶಯದಂತೆ ಸಮಸಮಾಜದ ಸ್ಥಾಪನೆಗಾಗಿ, ಶೋಷಿತ, ಅವಕಾಶ ವಂಚಿತ, ದೀನ ದಲಿತ, ಬಡಜನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ನಾನು ಪಟ್ಟಭದ್ರ ಹಿತಾಸಕ್ತಿಗಳಿಗೆ ಕಳೆದ 40 ವರ್ಷಗಳಿಂದ ಬಹುದೊಡ್ಡ ಸವಾಲಾಗಿದ್ದೇನೆ. ನನ್ನನ್ನು ಮೂಲೆಗೆ ಸರಿಸುವ ಮೂಲಕ ಸಮಾಜದ ಬಹುಸಂಖ್ಯಾತ ಜನರ ಧ್ವನಿಯನ್ನು ಅಡಗಿಸುವ ಪ್ರಯತ್ನ ಇಂದು ನಡೆಯುತ್ತಿದೆ. ಬಹಳಷ್ಟು ಮಂದಿ ಪೂಜ್ಯ ಸ್ವಾಮೀಜಿಗಳು ಇದನ್ನು ಅರಿತು ನನ್ನ ಬೆಂಬಲಕ್ಕೆ ನಿಂತು, ಇಡೀ ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸತ್ಯ ನನ್ನ ಜತೆ ಇದೆ, ಸತ್ಯದ ಜತೆ ನಾನಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.