ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಈ ಹಿಂದೆ ಬಂಧನಕ್ಕೊಳಗಾಗಿ ತಿಹಾರ್ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅವರ ಬಿಡುಗಡೆಗೆ ಆಗ್ರಹಿಸಿ ಏರ್ ಇಂಡಿಯಾ ವಿಮಾನವನ್ನು ಹೈಜಾಕ್ ಮಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಭೋಲಾನಾಥ್ ಪಾಂಡೆ ಶುಕ್ರವಾರದಂದು ವಿಧಿವಶರಾಗಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ 71 ವರ್ಷದ ಭೋಲಾನಾಥ್ ಪಾಂಡೆ
ವಿಧಿವಶರಾಗಿದ್ದು, ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ನಿವಾಸದಲ್ಲಿ ಇರಿಸಲಾಗಿದೆ. ಇಂದು ಮೃತರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದ ದೌವೊಭ (ಈಗಿನ ಬೈರಿಯಾ) ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಭೋಲಾನಾಥ್ ಪಾಂಡೆ, ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ನಡೆದ ಚುನಾವಣೆಯಲ್ಲಿ ಪ್ರತಿಪಕ್ಷಗಳು ಅಧಿಕಾರಕ್ಕೆ ಬಂದಿದ್ದು, ವಿವಿಧ ಹಗರಣಗಳ ಕಾರಣಕ್ಕಾಗಿ 1978 ರಲ್ಲಿ ಬಂಧನಕ್ಕೆ ಒಳಗಾಗಿ ನವದೆಹಲಿಯ ತಿಹಾರ್ ಜೈಲಿನಲ್ಲಿದ್ದರು. ಅವರ ಬಿಡುಗಡೆಗೆ ಆಗ್ರಹಿಸಿ ಏರ್ ಇಂಡಿಯಾ ವಿಮಾನ ಹೈಜಾಕ್ ಮಾಡಿದ್ದರು.
ತಮ್ಮ ಸ್ನೇಹಿತ ದೇವೇಂದ್ರ ಪಾಂಡೆ ಜೊತೆ ಸೇರಿ ಭೋಲಾನಾಥ್ ಪಾಂಡೆ, ಡಿಸೆಂಬರ್ 20, 1978ರಂದು ಆಟಿಕೆ ಗನ್ ತೆಗೆದುಕೊಂಡು 132 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಇಂಡಿಯನ್ ಏರ್ಲೈನ್ಸ್ ಫ್ಲೈಟ್ ಐಸಿ 410 ಅನ್ನು ಹೈಜಾಕ್ ಮಾಡಿ ಇಂದಿರಾ ಗಾಂಧಿ ಬಿಡುಗಡೆಗೆ ಆಗ್ರಹಿಸಿದ್ದರು. ಬಳಿಕ ಹೈಜಾಕ್ ಪ್ರಕರಣ ಸುಖಾಂತ್ಯಗೊಂಡಿತ್ತು.