ಕಲಬುರಗಿ: ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಬಿಸಿಯೂಟ ಸೇವಿಸಿದ ಸುಮಾರು 70ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾಗಿದ್ದಾರೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಮಧ್ಯಾಹ್ನ ಬಿಸಿಯೂಟ ಮಾಡಿದ ನಂತರ ಏಕಾಏಕಿ ವಾಂತಿ ಕಾಣಿಸಿಕೊಂಡಿದೆ. ತೀವ್ರ ಸ್ವಸ್ಥರಾದ ಮಕ್ಕಳನ್ನು ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಸಮಸ್ಯೆ ಕಡಿಮೆ ಇರುವ ಮಕ್ಕಳಿಗೆ ಕೇಂದ್ರದಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ.
ಬಿಸಿಯೂಟದಲ್ಲಿ ವ್ಯತ್ಯಾಸವಾಗಿರುವ ಶಂಕೆ ವ್ಯಕ್ತವಾಗಿದ್ದು. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗ್ರಾಮದಲ್ಲಿನ ಬಹುತೇಕ ಮಕ್ಕಳ ಪೋಷಕರು ಹೊಲ ಗದ್ದೆಗಳಿಗೆ ಹೋಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಮಕ್ಕಳು ಅಸ್ವಸ್ಥರಾಗಿದ್ದರೂ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗಿಲ್ಲ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.