ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ನಡೆಯುತ್ತಿರುವ ಹಲ್ಲೆ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಶಿಫಾರಸು ಮಾಡಲು ರಾಜ್ಯ ಆರೋಗ್ಯ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ 10 ಮಂದಿ ಒಳಗೊಂಡ ಸಮಿತಿ ರಚಿಸಿ ಆರೋಗ್ಯ ಇಲಾಖೆ ಆಯುಕ್ತ ಡಾ. ರಂದೀಪ್ ಆದೇಶಿಸಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಸಮಿತಿ ಅಧ್ಯಕ್ಷರಾಗಿರುತ್ತಾರೆ. ವೈದ್ಯಕೀಯ ಜಂಟಿ ನಿರ್ದೇಶಕರು, ಆರೋಗ್ಯ ಮತ್ತು ಯೋಜನೆ-1 ಉಪ ನಿರ್ದೇಶಕರು, ಮಾನಸಿಕ ಆರೋಗ್ಯ ವಿಭಾಗದ ಉಪನಿರ್ದೇಶಕರು, ವೈದ್ಯಕೀಯ ಮತ್ತು ಕೆಜಿಎಂಒಎ ಅಧ್ಯಕ್ಷ –ಉಪನಿರ್ದೇಶಕರು, ಬಳ್ಳಾರಿ ಜಿಲ್ಲಾ ಶಸ್ತ್ರಚಿಕಿತ್ಸಕ, ಆನೇಕಲ್ ವೈದ್ಯಾಧಿಕಾರಿಗಳು ಸದಸ್ಯರಾಗಿರುತ್ತಾರೆ. ಕೆಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸದಸ್ಯ ಕಾರ್ಯದರ್ಶಿಯಾಗಿ, ನ್ಯಾಯವಾದಿ ಮತ್ತು ಮಹಿಳಾ ಪೊಲೀಸ್ ಅಧಿಕಾರಿಗಳು ವಿಶೇಷ ಆಹ್ವಾನಿತರಾಗಿ ಈ ಸಮಿತಿಯಲ್ಲಿ ಇರುತ್ತಾರೆ. ಈ ಸಮಿತಿಯು ಮಹಿಳಾ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿ ಮೇಲೆ ನಡೆಯುತ್ತಿರುವ ಹಲ್ಲೆ ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಶಿಫಾರಸು ಮಾಡಲಿದೆ.