ಪಾಕಿಸ್ತಾನ ಮೂಲದ ಯುವತಿಯೊಬ್ಬಳು ಗೋಲ್ಡ್‌ಮನ್ ಸ್ಯಾಚ್ಸ್ ಮತ್ತು ಜೆಪಿ ಮೋರ್ಗನ್‌ನಂತಹ ಅತ್ಯುತ್ತಮ ಐಟಿ ಕಂಪನಿಗಳ ಉದ್ಯೋಗ ತೊರೆದು ಆನ್‌ಲೈನ್‌ನಲ್ಲಿ ಬಟ್ಟೆ ಮಾರಾಟದ ಮೂಲಕ ತಿಂಗಳಿಗೆ 84 ಲಕ್ಷ ರೂಪಾಯಿ ಗಳಿಸುತ್ತಿದ್ದಾಳೆ. ಝೋರೀನ್ ಕಬಾನಿ ಮೂಲತಃ ಪಾಕಿಸ್ತಾನದವಳು ಮತ್ತು ಈಗ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾಳೆ.
ಹಣಕಾಸು, ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರಗಳಿಗೆ ಪ್ರವೇಶಿಸಲು ಪಾಕಿಸ್ತಾನದಲ್ಲಿ ಸಾಂಸ್ಕೃತಿಕ ಒತ್ತಡಗಳಿದ್ದವು. ಆದರೂ ಝೋರೀನ್‌ಳ ಫ್ಯಾಷನ್ ಪ್ರೀತಿ ಕಡಿಮೆಯಾಗಲಿಲ್ಲ. ಆನ್‌ಲೈನ್‌ನಲ್ಲಿ ಆಕೆ ಬಟ್ಟೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದಳು. ಇದೇ ಯಶಸ್ವಿ ಉದ್ಯಮವಾಗಿ ಬದಲಾಯ್ತು. ಸದ್ಯ ಈಕೆ ಪ್ರತಿ ತಿಂಗಳು 100,000 ಡಾಲರ್ ಗಳಿಸುತ್ತಿದ್ದಾಳೆ.
ಪದವಿ ಬಳಿಕ 2010ರಲ್ಲಿ ಕಬಾನಿ ಗೋಲ್ಡ್‌ಮನ್ ಸ್ಯಾಚ್ಸ್ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದಳು. 2013 ರಲ್ಲಿ ಜೆಪಿ ಮೋರ್ಗನ್ ಸೇರಿಕೊಂಡಳು. ಉನ್ನತ ಹುದ್ದೆಗಳಿದ್ದರೂ ಆಕೆಗೆ ಅದರಲ್ಲಿ ತೃಪ್ತಿ ಇರಲಿಲ್ಲ. 2022ರಲ್ಲಿ ಉದ್ಯೋಗ ತೊರೆಯುವ ದಿಟ್ಟ ನಿರ್ಧಾರ ಮಾಡಿದ ಕಬಾನಿ ಜೀವನದಲ್ಲಿ ಸೃಜನಶೀಲ ಅಥವಾ ಅರ್ಥಪೂರ್ಣವಾದದ್ದನ್ನು ಮಾಡಲು ನಿರ್ಧರಿಸಿದಳು.
ಕೆಲವು ತಿಂಗಳುಗಳ ನಂತರ ಕಿರಿಯ ಸಹೋದರ ಆಕೆಗೆ Whatnot ಅನ್ನು ಪರಿಚಯಿಸಿದ್ದ. ಇದು ಬಳಕೆದಾರರು ವಸ್ತುಗಳನ್ನು ಲೈವ್ ಆಗಿ ಮಾರಾಟ ಮಾಡುವ ಹರಾಜು ಅಪ್ಲಿಕೇಶನ್. ಕಬಾನಿ ಆ್ಯಪ್‌ನ ಮಹಿಳಾ ಫ್ಯಾಷನ್ ವಿಭಾಗ ನೋಡಿ ಆಕರ್ಷಿತರಾದರು ಮತ್ತು ಅದರಲ್ಲಿ ಆಳವಾಗಿ ತೊಡಗಿಸಿಕೊಂಡರು.
ಒಂದು ತಿಂಗಳೊಳಗೆ ಕಬಾನಿ zkstyles ಎಂಬ ಪೇಜ್ ಅನ್ನು ಪ್ರಾರಂಭಿಸಿದಳು. ಇದರ ಮೂಲಕವೇ ತಿಂಗಳಿಗೆ 84 ಲಕ್ಷ ಗಳಿಸುತ್ತಿದ್ದಾಳೆ. ಸುಮಾರು 13 ವರ್ಷಗಳಿಂದ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದ್ದ ಆಕೆಗೆ ಕ್ಯಾಮರಾ ಎದುರು ಮಾತನಾಡುವುದು ಕಷ್ಟವಾಗಲಿಲ್ಲ.
ಹೆಚ್ಚು ಲೈವ್ ಸ್ಟ್ರೀಮ್‌ಗಳು ಮುಂದುವರಿದಂತೆಲ್ಲ ಆಕೆಯ ಆದಾಯ ಹೆಚ್ಚಿತ್ತು. ಕೆಲವೇ ತಿಂಗಳುಗಳಲ್ಲಿ ಇದೇ ಆಕೆಯ ಫುಲ್ ಟೈಮ್ ಕೆಲಸವಾಗಿಬಿಟ್ಟಿತ್ತು. ತನ್ನ ಕಾರ್ಪೊರೇಟ್ ದಿನಚರಿಯಂತೆಯೇ ಸೋಮವಾರದಿಂದ ಶುಕ್ರವಾರದವರೆಗೆ ನಿಯಮಿತ ಸ್ಟ್ರೀಮಿಂಗ್ ವೇಳಾಪಟ್ಟಿಯನ್ನು ಹಾಕಿಕೊಳ್ಳುವ ಮೂಲಕ ಆಕೆ ಶಿಸ್ತು ಉಳಿಸಿಕೊಂಡಿದ್ದಾಳೆ. ಕಬಾನಿ ತನ್ನ ವೀಕ್ಷಕರಿಗೆ ಫ್ಯಾಷನ್ ಸಲಹೆಗಳು ಮತ್ತು ಶೈಲಿ ಕುರಿತ ಮಾಹಿತಿಯನ್ನೂ ನೀಡುತ್ತಾಳೆ. ಮೊದಲ ತಿಂಗಳಲ್ಲಿ ಆಕೆಯ ಗಳಿಕೆ 10 ಲಕ್ಷ ರೂಪಾಯಿ ಆಗಿತ್ತು. ಈ ಪ್ಲಾಟ್‌ಫಾರ್ಮ್‌ನಲ್ಲಿ 75,000 ಕ್ಕೂ ಹೆಚ್ಚು ವಸ್ತುಗಳನ್ನು ಮಾರಾಟ ಮಾಡಿದ್ದಾಳೆ.