
ಮಂಗಳೂರು: ಬೆಂಗಳೂರು ಬಳಿಕ ಮಲೆನಾಡಿನಲ್ಲಿಯೂ ಕಂಬಳ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರಾವಳಿಯ ಜಾನಪದ ಕ್ರೀಡೆ ಕಂಬಳ 2025ರ ಏಪ್ರಿಲ್ 19, 20 ರಂದು ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ನಡೆಯಲಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಂಬಳ ನೆರವೇರಿಸಲಾಗಿತ್ತು. ಇದೇ ಮೊದಲ ಬಾರಿಗೆ ಮಲೆನಾಡಿನಲ್ಲಿಯೂ ಕಂಬಳ ಆಯೋಜಿಸಲು ಪೂರಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ, ರೋಟರಿ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 3181, 3182, ಶಿವಮೊಗ್ಗ ಕಂಬಳ ಸಮಿತಿ ಸಹಯೋಗದಲ್ಲಿ ಕಂಬಳ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದ ಜಾನಪದ ಕ್ರೀಡೆಯನ್ನು ವಿಶ್ವ ಪಾರಂಪರಿಕ ತಾಣವಾದ ಶಿವಮೊಗ್ಗದಲ್ಲಿ ನಡೆಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸೇರಿದಂತೆ ಎಲ್ಲರ ನೆರವು ಪಡೆಯಲಾಗುವುದು. ಕಲ್ಪನಾ ಸಂತೋಷ್, ಕೆ.ಎಸ್. ನಾಗಪಾತ್ರಿಗಳು, ನಾಗಯಕ್ಷೆ ದೇವಸ್ಥಾನ ಹೆಗಲತ್ತಿ, ತೀರ್ಥಹಳ್ಳಿ ಇವರು ಶಿವಮೊಗ್ಗದಲ್ಲಿ ಕಂಬಳ ನಡೆಸಲು ಯೋಜಿಸಿದ್ದಾರೆ ಎಂದರು.
ಶಿವಮೊಗ್ಗ, ಹಾಸನ, ಮಡಿಕೇರಿ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬೈಂದೂರು, ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ಕಂಬಳ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಶಿವಮೊಗ್ಗಕ್ಕೆ ತೆರಳಿ ಕಂಬಳಕ್ಕೆ ಬೇಕಾದ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಬಾರಿ ಕರಾವಳಿಯಲ್ಲಿ 25 ಕಂಬಳ ಆಯೋಜಿಸಲು ತೀರ್ಮಾನಿಸಲಾಗಿದ್ದು, ದಿನಾಂಕ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಂಬಳ ಸಮಿತಿ ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಪಿ.ಆರ್. ಶೆಟ್ಟಿ, ಅರುಣ್ ಶೆಟ್ಟಿ, ರೋಟರಿ ಕ್ಲಬ್ ಜಗನ್ನಾಥ್ ಕೋಟೆ, ರಾಜಗೋಪಾಲ್ ರೈ, ವಿಕ್ರಂ ದತ್, ಎಲಿಯಾಸ್ ಸಾಂಕ್ಟಿಸ್, ಲೋಕೇಶ್ ಶೆಟ್ಟಿ ಇದ್ದರು.