ನವದೆಹಲಿ: ಕೋಲ್ಕತ್ತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಮತ್ತು ನಂತರ ನಡೆದ ದಾಂಧಲೆ ವಿರುದ್ಧ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘ ಆಗಸ್ಟ್ 17ರ ಶನಿವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆ 24 ಗಂಟೆಗಳ ಕಾಲ ದೇಶಾದ್ಯಂತ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಿ ಮುಷ್ಕರ ಕೈಗೊಂಡಿದೆ.
ಈ ಅವಧಿಯಲ್ಲಿ ತುರ್ತು ಸೇವೆಗಳು ಆಸ್ಪತ್ರೆಗಳಲ್ಲಿ ಲಭ್ಯ ಇರುತ್ತವೆ. ಹೊರರೋಗಿಗಳ ವಿಭಾಗ(OPD), ಶಸ್ತ್ರಚಿಕಿತ್ಸೆ ಸೇವೆ ಇರುವುದಿಲ್ಲ. ಆಧುನಿಕ ಆರೋಗ್ಯ ಸೇವೆ ಒದಗಿಸುವ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಬಂದ್ ಅನ್ವಯವಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್.ಜಿ. ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವಿರೋಧಿಸಿ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ನಡೆಸಿದ್ದನ್ನು ಖಂಡಿಸಿ ವೈದ್ಯರ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಎಲ್ಲಾ ಅಗತ್ಯ ಸೇವೆಗಳನ್ನು ನಿರ್ವಹಿಸಲಾಗುವುದು. ತುರ್ತು ಚಿಕಿತ್ಸೆ ಅಗತ್ಯವಿರುವ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುವುದು. ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಐಎಂಎ ನೀಡಿದ ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ಒಪಿಡಿ ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.