ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜೀನಾಮೆಗೆ ಬಿಜೆಪಿ ಶಾಸಕರಿಂದಲೇ ಒತ್ತಾಯ ಕೇಳಿಬರುತ್ತಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಈಗಾಗಲೇ ಹರಿಹರ ಶಾಸಕ ಬಿ.ಪಿ ಹರೀಶ್, ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಬಿಜೆಪಿ ಶಾಸಕರು, ನಾಯಕರು ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆಯಾಗಬೇಕು, ರಾಜೀನಾಮೆ ನೀಡಬೇಕು ಎಂಬ ಮಾತುಗಳನ್ನು ಆಡುತ್ತಿದ್ದು, ಇದು ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, ವಿಜಯೇಂದ್ರ ವಿಚಾರದ ಬಗ್ಗೆ ವರಿಷ್ಠರು ಸೂಕ್ತ ಸಮದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತಾರೆ. ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆ, ವಿದ್ಯಮಾನಗಳ ಬಗ್ಗೆ ವರಿಷ್ಠರು ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ತೀರ್ಮಾನ ಮಾಡುತ್ತಾರೆ ಎಂದರು.
ನಾನೂ ಕೂಡ ಶೀಘ್ರದಲ್ಲಿ ದೆಹಲಿ ನಾಯಕರನ್ನು ಭೇಟಿಯಾಗುತ್ತೇನೆ. ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ವರಿಷ್ಠರ ಗಮನಕ್ಕೆ ತಂದು ಮಾತನಾಡುತ್ತೇನೆ. ಶೀಘ್ರದಲ್ಲೇ ಪರಿಹಾರ ಕೊಡುವಂತೆಯೂ ಮನವಿ ಮಾಡುತ್ತೇನೆ ಎಂದು ಹೇಳಿದರು.