ಮೈಸೂರು: ಮುಡಾ ಹಗರಣ ಸೇರಿದಂತೆ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ -ಜೆಡಿಎಸ್ ಬೆಂಗಳೂರಿನಿಂದ ಕೈಗೊಂಡಿದ್ದ ಪಾದಯಾತ್ರೆ ಮೈಸೂರು ತಲುಪಿದೆ.
ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಜನಾಂದೋಲನ ನಡೆದ ವೇದಿಕೆಯಲ್ಲಿಯೇ ಬಿಜೆಪಿ -ಜೆಡಿಎಸ್ ಸಮಾವೇಶ ಹಮ್ಮಿಕೊಂಡಿದ್ದು, ಎಂಟು ದಿನದ ದೋಸ್ತಿ ಹೋರಾಟಕ್ಕೆ ತೆರೆ ಬೀಳಲಿದೆ.
ಸಮಾವೇಶದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ಸಾಧ್ಯತೆ ಇದೆ.
ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾದ ಅನುದಾನ ದುರ್ಬಳಕೆ ವಿಚಾರವಾಗಿ ಕಳೆದ ಶನಿವಾರ ಬೆಂಗಳೂರಿನ ಕೆಂಗೇರಿಯಿಂದ ಪಾದಯಾತ್ರೆ ಆರಂಭವಾಗಿತ್ತು, 128 ಕಿಲೋಮೀಟರ್ ಸಾಗಿದ ಪಾದಯಾತ್ರೆ ಶುಕ್ರವಾರ ಮೈಸೂರು ತಲುಪಿದೆ. ಶನಿವಾರ ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ಚಲೋ ಸಮಾರೋಪ ಸಮಾರಂಭ ನಡೆಯಲಿದೆ.