ವಿದ್ಯಾರ್ಥಿಗೆ ಶೈಕ್ಷಣಿಕ ಸಾಲದ ಎರಡನೇ ಕಂತನ್ನು ಬಿಡುಗಡೆ ಮಾಡದ ಕಾರಣ ಬ್ಯಾಂಕ್ ಆಫ್ ಬರೋಡಾಗೆ 1.70 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಆದೇಶಿಸಲಾಗಿದೆ. ಜರ್ಮನಿಯ ಹ್ಯಾಂಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಎಂಎಸ್ ವ್ಯಾಸಂಗದ ವಿದ್ಯಾರ್ಥಿಗೆ ಪರಿಹಾರ ಹಣ ನೀಡುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಿವಾಸಿಯಾಗಿರುವ ದೂರುದಾರ ಪ್ರೀತಮ್ ಜೆ.ಬಿ. ಯಾವುದೇ ಕಾನೂನು ನೆರವು ಪಡೆಯದೆ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಬ್ಯಾಂಕ್ ವಿರುದ್ಧ ತಮ್ಮ ಮೊಕದ್ದಮೆ ಹೂಡಿದ್ದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನೀಡಿದ ಆದೇಶವನ್ನು ಮಾರ್ಪಡಿಸಿ, ಬ್ಯಾಂಕ್‌ನ ಮೇಲ್ಮನವಿಯನ್ನು ಭಾಗಶಃ ಅನುಮತಿಸಿದ ರಾಜ್ಯ ಆಯೋಗದ ನ್ಯಾಯಾಂಗ ಸದಸ್ಯ ಕೆ.ಬಿ. ಸಂಗಣ್ಣನವರ್ ಮತ್ತು ಸದಸ್ಯೆ ದಿವ್ಯಶ್ರೀ ಎಂ ಅವರನ್ನೊಳಗೊಂಡ ಆಯೋಗ ಪ್ರೀತಮ್‌ಗೆ ವ್ಯಾಜ್ಯ ವೆಚ್ಚವಾಗಿ 20,000 ರೂ.ಮತ್ತು ಭೌತಿಕ ಮತ್ತು ಮಾನಸಿಕ ಸಂಕಟಕ್ಕಾಗಿ 1.50 ಲಕ್ಷ ರೂ.ಗಳನ್ನು ಪಾವತಿಸಲು ಬ್ಯಾಂಕ್‌ಗೆ ಸೂಚಿಸಿತು.
ಪ್ರೀತಮ್ 2017 ರಲ್ಲಿ ಹ್ಯಾಂಬರ್ಗ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಗೆ ಸೇರಿಕೊಂಡು 18 ಲಕ್ಷ ರೂಪಾಯಿ ಶಿಕ್ಷಣ ಸಾಲಕ್ಕಾಗಿ ಬ್ಯಾಂಕ್ ಸಂಪರ್ಕಿಸಿದರು. ಸಾಲಕ್ಕಾಗಿ 42.95 ಲಕ್ಷ ಮೌಲ್ಯದ ಪೋಷಕರ ಸ್ಥಿರಾಸ್ತಿಯನ್ನು ಅಡಮಾನವಿಟ್ಟಿದ್ದರು. ಅದರಂತೆ 2017ರ ನವೆಂಬರ್ 29ರಂದು ಬ್ಯಾಂಕ್ 14 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದು, ಸಾಲಕ್ಕೆ ಭದ್ರತೆ ಮಾಡಲು ಉದ್ದೇಶಿಸಿರುವ ಆಸ್ತಿಯನ್ನು ನೋಂದಣಿ ಮಾಡಿಸಲು ಬ್ಯಾಂಕ್, ಪ್ರೀತಮ್ ತಂದೆಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆಸಿತ್ತು. ಆದರೆ ಬ್ಯಾಂಕ್ ಅಧಿಕಾರಿಗಳು ನಂತರ ಪ್ರೀತಮ್ ಸಹ ತಮ್ಮ ಸಮ್ಮುಖದಲ್ಲಿ ದಾಖಲೆಗಳಿಗೆ ಸಹಿ ಹಾಕಬೇಕು ಎಂದು ಒತ್ತಾಯಿಸಿದರು.
ವಿಮಾನ ಟಿಕೆಟ್‌ಗೆ 40,000 ರೂಪಾಯಿ ಖರ್ಚು ಮಾಡಿ ಪ್ರೀತಮ್ ಭಾರತಕ್ಕೆ ಬಂದಿದ್ದರೆ, ಬ್ಯಾಂಕ್ 6.24 ಲಕ್ಷ ರೂಪಾಯಿಯಷ್ಟೇ ಸಾಲ ಬಿಡುಗಡೆ ಮಾಡಿದೆ. ಉಳಿದ ಮೊತ್ತಕ್ಕಾಗಿ ಬ್ಯಾಂಕ್‌ಗೆ ಮನವಿ ಸಲ್ಲಿಸಿದಾಗ ಬ್ಯಾಂಕ್ ನಿರಾಕರಿಸಿದೆ. ಹಣದ ಅವಶ್ಯಕತೆ ಇದ್ದ ಕಾರಣ, ಹೆಚ್ಚಿನ ಬಡ್ಡಿಗೆ ಖಾಸಗಿ ಲೇವಾದೇವಿದಾರರಿಂದ ಪ್ರೀತಮ್ ತಂದೆ 9 ಲಕ್ಷ ರೂ. ಸಾಲ ತಂದಿದ್ದರು.
ಮಂಜೂರಾದ 14 ಲಕ್ಷ ಸಾಲದಲ್ಲಿ 6.24 ಲಕ್ಷ ಬಿಡುಗಡೆ ಮಾಡಿದ್ದು ದೂರುದಾರರು ವ್ಯಾಸಂಗ ಮಾಡಲು 9 ಲಕ್ಷ ರೂ.ಗೆ ಸ್ವಂತ ವ್ಯವಸ್ಥೆ ಮಾಡಿಕೊಂಡು ಕೋರ್ಸ್ ಮುಗಿಸಿದಾಗ ಉಳಿದ ಸಾಲದ ಮೊತ್ತವನ್ನು ಬಿಡುಗಡೆ ಮಾಡುವ ಪ್ರಶ್ನೆಯೇ ಉದ್ಭವಿಸಲಿಲ್ಲ ಎಂದು ಬ್ಯಾಂಕ್ ವಾದಿಸಿತು.