ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಅಂತಿಮ ವರ್ಷದ ಇ- ಕಾಮರ್ಸ್ ವಿಷಯದ ಪ್ರಶ್ನೆ ಪತ್ರಿಕೆ ಬದಲು ಉತ್ತರ ಪತ್ರಿಕೆ ನೀಡಿದ ಘಟನೆ ನಡೆದಿದೆ.
ಮಂಗಳವಾರ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಬದಲು ಉತ್ತರಗಳಿದ್ದ ಪತ್ರಿಕೆಗಳನ್ನು ನೀಡಲಾಗಿದೆ. ದಾವಣಗೆರೆ ವಿವಿ ಪರೀಕ್ಷಾ ವಿಭಾಗದ ಅಧಿಕಾರಿಯ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಮನೆಗೆ ಮರಳಿದ್ದಾರೆ. ಪರೀಕ್ಷೆಯನ್ನು ರದ್ದುಪಡಿಸಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಬಿಕಾಂ ಅಂತಿಮ ವರ್ಷದ ಸುಮಾರು 600 ವಿದ್ಯಾರ್ಥಿಗಳು ಮಂಗಳವಾರ 6ನೇ ಸೆಮಿಸ್ಟರ್ ನ ಇ- ಕಾಮರ್ಸ್ ವಿಷಯದ ಪರೀಕ್ಷೆ ಬರೆಯಲು ತಮ್ಮ ಕಾಲೇಜುಗಳಿಗೆ ಆಗಮಿಸಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರಶ್ನೆ ಪತ್ರಿಕೆ ನೀಡುವ ಬದಲಿಗೆ ಮೌಲ್ಯಮಾಪನ ಮಾಡಲು ಸಿದ್ಧಪಡಿಸಲಾಗಿದ್ದ ಪ್ರಶ್ನೆಗಳ ಜೊತೆಗೆ ಉತ್ತರಗಳನ್ನು ಮುದ್ರಿಸಿದ ಪ್ರತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ತಕ್ಷಣವೇ ಎಚ್ಚೆತ್ತು ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಕುಲಸಚಿವರ ಗಮನಕ್ಕೆ ವಿಷಯ ತಂದಿದ್ದು, ತಪ್ಪಿನ ಅರಿವಾಗುತ್ತಿದ್ದಂತೆ ಪರೀಕ್ಷೆ ರದ್ದುಪಡಿಸಿ ಮುಂದೂಡಲಾಗಿದೆ.