ವಿಮಾನ ಪ್ರಯಾಣಕ್ಕಿಂತ ರೈಲು ಪ್ರಯಾಣ ಅಗ್ಗವಾಗಿರುವ ಕಾರಣ ಜನರು ರೈಲ್ವೆ ಪ್ರಯಾಣವನ್ನು ಹೆಚ್ಚು ಇಷ್ಟಪಡ್ತಾರೆ. ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡ್ತಿದೆ. ಸಾಮಾನ್ಯ ಮತ್ತು ಸ್ಲೀಪರ್ ಕೋಚ್ ಹೊರತುಪಡಿಸಿ ಭಾರತೀಯ ರೈಲ್ವೇಯು ಮೂರರಿಂದ ಮೊದಲ ಎಸಿ ವರ್ಗದ ಪ್ರಯಾಣಿಕರಿಗೆ ದಿಂಬು, ಬೆಡ್ ಶೀಟ್, ಹೊದಿಕೆಯಂತಹ ಸೌಲಭ್ಯಗಳನ್ನು ಒದಗಿಸುತ್ತದೆ. ಆದ್ರೆ ಕೆಲ ಪ್ರಯಾಣಿಕರು, ರೈಲ್ವೆ ನೀಡುವ ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಬೆಡ್ ಶೀಟ್, ದಿಂಬು ಕಳ್ಳತನ ಮಾಡುವವರಿದ್ದಾರೆ.
ರೈಲ್ವೆ ಇಲಾಖೆ ಇದನ್ನು ಅಪರಾಧವೆಂದು ಪರಿಗಣಿಸುತ್ತದೆ. ಈ ಕೃತ್ಯ ನಡೆಸಿ ಸಿಕ್ಕಿಬಿದ್ದರೆ ರೈಲ್ವೇ ನಿಯಮಗಳ ಪ್ರಕಾರ ದಂಡ ತೆರಬೇಕು. ಅಲ್ಲದೆ 5 ವರ್ಷ ಜೈಲು ಶಿಕ್ಷೆ ವಿಧಿಸುತ್ತದೆ.
ರೈಲ್ವೇ ಆಸ್ತಿ ಕಾಯಿದೆ, 1966 ರ ಪ್ರಕಾರ, ರೈಲಿನ ಯಾವುದೇ ವಸ್ತುವನ್ನು ಮೊದಲ ಬಾರಿ ತೆಗೆದುಕೊಂಡು ಹೋದ್ರೆ, ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1000 ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸಬಹುದು. ಅಪರಾಧ ಮರುಕಳಿಸಿದ್ರೆ ಐದು ವರ್ಷ ಜೈಲು ಶಿಕ್ಷೆ ಅಥವಾ ಬಾರಿ ದಂಡ ವಿಧಿಸಲಾಗುತ್ತದೆ. ಒಂದ್ವೇಳೆ ನಿಮ್ಮ ಬೆಡ್ ಮೇಲೆ ದಿಂಬು, ಬೆಡ್ ಶೀಟ್ ಇಲ್ಲ ಎಂದಾದಲ್ಲಿ ನೀವು ಅಟೆಂಡರ್ ಗೆ ಮಾಹಿತಿ ನೀಡಬೇಕಾಗುತ್ತದೆ.