ಬೆಂಗಳೂರು : ಮೃತ ಪಿಎಸ್ ಐ ಪರಶುರಾಮ್ ಪತ್ನಿ ಶ್ವೇತಾಗೆ ಸರ್ಕಾರಿ ಉದ್ಯೋಗ, ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಪ್ರಕರಣದ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವರು ‘ಸಿಐಡಿ ತನಿಖೆಗೆ ಪ್ರಕರಣವನ್ನು ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ. ಇದು ಆತ್ಮಹತ್ಯೆ ಅಲ್ಲ ಎಂದು ಇಲಾಖೆ ಹೇಳಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ಗೊತ್ತಾಗುತ್ತದೆ. ಪಿಎಸ್ ಐ ಪರಶುರಾಮ್ ಪತ್ನಿ ಶ್ವೇತಾಗೆ ಸರ್ಕಾರಿ ಉದ್ಯೋಗ, ಪರಿಹಾರ ನೀಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಎಂದು ಹೇಳಿದರು.
ಯಾದಗಿರಿ ಸೈಬರ್ ಕ್ರೈಂ ಠಾಣೆ ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪೋಸ್ಟಿಂಗ್ ಗಾಗಿ ಪದೇ ಪದೇ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಹಾಗೂ ಶಾಸಕನ ಪುತ್ರನ ವಿರುದ್ಧ ಪಿಎಸ್ಐ ಪರಶುರಾಮ್ ಪತ್ನಿ ಶ್ವೇತಾ ಯಾದಗಿರಿ ಎಸ್ ಪಿ ಸಂಗೀತಾ ಅವರಿಗೆ ದೂರು ನೀಡಿದ್ದಾರೆ. ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಪಿಎಸ್ಐ ಹುದ್ದೆ ಪಡೆಯಲು ಪರಶುರಾಮ್ 30 ಲಕ್ಷ ರೂಪಾಯಿ ನೀಡಿದ್ದಾರೆ. ಹುದ್ದೆಗಾಗಿ ಬಹಳ ಸಾಲ ಮಾಡಿದ್ದರು. ಈಗ ಒಂದು ವರ್ಷ ಪೂರೈಸುವ ಮೊದಲೇ ಯಾದಗಿರಿಯ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.