ನವದೆಹಲಿ: ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ನಗದು ರಹಿತ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
ಚಂಡೀಗಢ ಮತ್ತು ಅಸ್ಸಾಂನಲ್ಲಿ ಈಗಾಗಲೇ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಲೋಕಸಭೆಗೆ ನೀಡಲಾದ ಲಿಖಿತ ಉತ್ತರದಲ್ಲಿ ಸಚಿವರು ಈ ಬಗ್ಗೆ ಮಾಹಿತಿ ನೀಡಿದ್ದು, ಆಯುಷ್ಮಾನ್ ಭಾರತ್- ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯಡಿ ಸೇರ್ಪಡೆಯಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಬಹುದಾಗಿದೆ ಎಂದು ಹೇಳಿದ್ದಾರೆ.
ಅಪಘಾತ ಸಂಭವಿಸಿದ ದಿನದಿಂದ 7 ದಿನಗಳವರೆಗೆ ಗರಿಷ್ಠ 1.5 ಲಕ್ಷ ರೂಪಾಯಿವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಮೋಟಾರ್ ವಾಹನ ಕಾಯ್ದೆ ಸೆಕ್ಷನ್ 164 ಬಿ ಅಡಿಯಲ್ಲಿ ಸ್ಥಾಪಿಸಲಾದ ಮೋಟಾರ್ ವಾಹನ ಅಪಘಾತ ನಿಧಿಯ ಮೂಲಕ ಇಂತಹ ಪ್ರಕರಣಗಳಿಗೆ ನೆರವು ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.