ವಿಲಕ್ಷಣ ಪ್ರಕರಣ ಒಂದರಲ್ಲಿ ತಮಗೆ ಟಿವಿ ಹಾಗೂ ಮೊಬೈಲ್ ವೀಕ್ಷಿಸಲು ಪೋಷಕರು ನಿರ್ಬಂಧ ಹೇರುತ್ತಿದ್ದಾರೆ ಎಂದು ಆರೋಪಿಸಿ ಮಧ್ಯ ಪ್ರದೇಶದ ಇಬ್ಬರು ಮಕ್ಕಳು ತಮ್ಮ ಪೋಷಕರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇದೀಗ ಪ್ರಕರಣ ನ್ಯಾಯಾಲಯ ತಲುಪಿದೆ. ತಮ್ಮ ವಿರುದ್ಧ ಕೆಳಹಂತದ ನ್ಯಾಯಾಲಯದಲ್ಲಿ ದಾಖಲಾಗಿರುವ ದೂರನ್ನು ರದ್ದುಗೊಳಿಸುವಂತೆ ಕೋರಿ ಇದೀಗ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇಂದೂರಿನ ಚಂದನ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಈ ಪೋಷಕರ 21 ವರ್ಷದ ಮಗಳು ಹಾಗೂ ಎಂಟು ವರ್ಷದ ಮಗ ಪೋಷಕರು ಟಿವಿ ಹಾಗೂ ಮೊಬೈಲ್ ವೀಕ್ಷಣೆಗೆ ನಿರ್ಬಂಧ ಹೇರುತ್ತಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅವರುಗಳ ವಿರುದ್ಧ ಸೆಕ್ಷನ್ 342, 294, 323, 506 ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಬಳಿಕ ಪೊಲೀಸರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಒಂದೊಮ್ಮೆ ಆರೋಪ ಸಾಬೀತಾದರೆ ಪೋಷಕರು ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಿತ್ತು. ಇದರ ಮಧ್ಯೆ ದೂರು ನೀಡಿದ್ದ ಮಕ್ಕಳು ಅವರ ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದಿದ್ದು, ಈ ಕಾರಣಕ್ಕಾಗಿ ಉಭಯ ಕುಟುಂಬಗಳ ನಡುವೆ ಗಲಾಟೆ ಆರಂಭವಾಗಿತ್ತು. ಇದೆಲ್ಲದರ ನಡುವೆ ಇದೀಗ ಪೋಷಕರು ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ಈಗ ಅವರ ಅರ್ಜಿಯನ್ನು ಮನ್ನಿಸಿ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ.