ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಅಚ್ಚರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ನಿಪಾಣಿ ತಾಲೂಕಿನ ಯಮಗರ್ನಿ ಗ್ರಾಮದಲ್ಲಿ ಕಪ್ಪು ಇಂಡಿ ನಾಯಿಗೆ ಹಾರ ಹಾಕಿ ಗ್ರಾಮಕ್ಕೆ ಸ್ವಾಗತ ಕೋರಿದ್ದಾರೆ. ಅಷ್ಟೇ ಅಲ್ಲ ನಾಯಿಯ ಗೌರವಾರ್ಥ ಜನರು ಔತಣಕೂಟವನ್ನೂ ಏರ್ಪಡಿಸಿದ್ದರು. ಹಳ್ಳಿಗರಿಗೆ ಈ ನಾಯಿ ಮರಳುವುದು ಪವಾಡದಂತೆ ಕಂಡಿದೆ. ಹಳ್ಳಿಗರು ಈ ನಾಯಿಯನ್ನು ಮಹಾರಾಜ ಎಂದು ಕರೆದಿದ್ದಾರೆ.
ಮಹಾರಾಜ ದಕ್ಷಿಣ ಮಹಾರಾಷ್ಟ್ರದ ಪಂಢರಪುರದಲ್ಲಿ ಕಳೆದುಹೋಗಿದ್ದ. ಅಲ್ಲಿಂದ ತನ್ನ ಗ್ರಾಮವನ್ನು ಹುಡುಕಿಕೊಂಡು ಬಂದಿದ್ದಾನೆ. ಒಂದಲ್ಲ ಎರಡಲ್ಲ 250 ಕಿಮೀ ದೂರವನ್ನು ಕ್ರಮಿಸಿ ಮತ್ತೆ ಹಳ್ಳಿಗೆ ತಲುಪಿದ್ದಾನೆ. ಕಳೆದ ತಿಂಗಳು ಜೂನ್‌ನಲ್ಲಿ ಮಹಾರಾಜ ತಮ್ಮ ಮಾಲೀಕ ಕಮಲೇಶ್ ಕುಂಬಾರ್ ಅವರೊಂದಿಗೆ ಪಂಢರಪುರದಲ್ಲಿ ವಾರ್ಷಿಕ ವಾರಿ ಪಾದಯಾತ್ರೆಗೆ ಹೋಗಿದ್ದ. ಕಮಲೇಶ್ ಕುಂಬಾರ್ ಅವರು ಪ್ರತಿ ವರ್ಷ ಆಷಾಢ ಏಕಾದಶಿ ಮತ್ತು ಕಾರ್ತಿಕ ಏಕಾದಶಿ ಸಮಯದಲ್ಲಿ ಪಂಢರಪುರಕ್ಕೆ ಹೋಗುತ್ತಾರೆ. ಈ ವೇಳೆ ಮಹಾರಾಜ ಕೂಡ ಹೋಗಿದ್ದ.
ಸುಮಾರು 250 ಕಿ.ಮೀ ದೂರದವರೆಗೆ ಮಹಾರಾಜರು ಮಾಲೀಕನ ಜೊತೆ ಬಂದಿದ್ದ. ವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಹಾರಾಜ ಕಾಣೆಯಾಗಿದ್ದ. ಕಮಲೇಶ್ ಮಹಾರಾಜನನ್ನು ಹುಡುಕಲು ಆರಂಭಿಸಿದ್ರೂ ಆತ ಸಿಗದ ಕಾರಣ ಅಲ್ಲಿಂದ ಮನೆಗೆ ವಾಪಸ್ ಬಂದಿದ್ದರು.
ಆದ್ರೆ ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಮಹಾರಾಜ ಮನೆಗೆ ವಾಪಸ್ ಬಂದಿದ್ದಾನೆ. ಮನೆ ಮುಂದೆ ನಿಂತಿದ್ದ ಆತನನ್ನು ನೋಡಿ ಮಾಲೀಕರಿಗೆ ಖುಷಿಯಾಗಿದೆ. ಮಹಾರಾಜನ ಆಗಮನವನ್ನು ಕಮಲೇಶ್ ಗ್ರಾಮಸ್ಥರೊಂದಿಗೆ ಸಂಭ್ರಮಿಸಿದ್ದಾರೆ.