ಮನ ಕಲಕುತ್ತೆ ಬಡ ಹುಡುಗನ ಕಣ್ಣೀರ ಕಥೆ; ವಿಡಿಯೋ ವೈರಲ್ ಆಗುತ್ತಿದ್ದಂತೆ ನೆರವಿಗೆ ಧಾವಿಸಿದ ನೆಟ್ಟಿಗರು…! 25-07-2024 9:00AM IST / No Comments / Posted In: Latest News, India, Live News ಇಂದಿನ ದುಬಾರಿ ದುನಿಯಾದಲ್ಲಿ ಶ್ರೀಸಾಮಾನ್ಯರು ಬದುಕಲು ಪಡಿಪಾಟಲು ಪಡುವಂತಾಗಿದೆ. ಬಡವರಂತೂ ಒಂದು ದಿನದ ಊಟಕ್ಕೂ ಪರಿತಪಿಸುವ ಪರಿಸ್ಥಿತಿ ಇದೆ. ಜೀವನ ನಿರ್ವಹಣೆಗೆ ದೊಡ್ಡ ದೊಡ್ಡ ನಗರಗಳನ್ನು ಅರಸಿ ಹೋಗುವ ಬಡ ಕುಟುಂಬದ ಯುವಕರು ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಶತ ಪ್ರಯತ್ನ ನಡೆಸುತ್ತಾರೆ. ಅಂತಹ ಒಂದು ಕಣ್ಣೀರಿನ ಕಥೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಯುವಕನ ನೆರವಿಗೆ ಧಾವಿಸಿದ್ದಾರೆ. ಕೆಲಸ ಅರಸಿ ಮಹಾ ನಗರಗಳಿಗೆ ತೆರಳುವ ಬಡ ಕುಟುಂಬದ ಯುವಕರಿಗೆ ಝೋಮ್ಯಾಟೋ, ಸ್ವಿಗ್ಗಿ, ಅಮೆಜಾನ್, ಫ್ಲಿಪ್ಕಾರ್ಟ್ ನಂತಹ ದೊಡ್ಡ ದೊಡ್ಡ ಕಂಪನಿಗಳಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಸಿಕ್ಕರೂ ಸಹ ಡೆಲಿವರಿಗೆ ಬೇಕಾದ ವಾಹನ ಹಾಗೂ ತಾವು ತೆರಳಿದ್ದ ನಗರದಲ್ಲಿ ನೆಲೆಸಲು ಒಂದು ನೆಲೆ ಸಿಗುವುದು ಕಷ್ಟಕರವಾಗಿದೆ. ಇದೇ ರೀತಿ ಈಶಾನ್ಯ ಭಾರತದಿಂದ ಮುಂಬೈ ಮಹಾನಗರಿಗೆ ಆಗಮಿಸಿರುವ ಯುವಕ Borgoyary ತನ್ನ ಬವಣೆಯನ್ನು ಇನ್ಸ್ಟಾಗ್ರಾಮ್ ವಿಡಿಯೋ ಮೂಲಕ ಹೇಳಿಕೊಂಡಿದ್ದಾನೆ. ಕಲಾವಿದನೂ ಆಗಿರುವ ಈತ ಮುಂಬೈ ಸ್ಲಂ ಒಂದರಲ್ಲಿ ತಿಂಗಳಿಗೆ 500 ರೂಪಾಯಿ ಬಾಡಿಗೆಗೆ ರೂಮ್ ಒಂದನ್ನು ಪಡೆದುಕೊಂಡಿದ್ದು, ಅದು ಸಿರಿವಂತರ ಮನೆಯ ಟಾಯ್ಲೆಟ್ ಗಿಂತ ಚಿಕ್ಕದಾಗಿದೆ. ಅಲ್ಲದೇ ಇವನ ಜೊತೆಗೆ ಸ್ನೇಹಿತನೂ ಇದ್ದಾನೆ. ಅಲ್ಲಿಗೆ ಹೋಗಲು ಇರುವ ದಾರಿಯಿಂದ ಈತ ವಿಡಿಯೋ ರೆಕಾರ್ಡ್ ಮಾಡಿದ್ದು, ಇದನ್ನು ನೋಡಿದ ನೆಟ್ಟಿಗರು ಮಮ್ಮಲು ಮರುಗಿದ್ದಾರೆ. ಕೆಲವರು ನೀನು ಬಾಲಿವುಡ್ ನಟನಂತೆ ಕಾಣಿಸುತ್ತಿದ್ದೀಯಾ, ಚಿತ್ರರಂಗದಲ್ಲಿ ಏಕೆ ಅವಕಾಶಕ್ಕೆ ಪ್ರಯತ್ನಿಸಬಾರದು ಎಂದು ಹೇಳಿದರೆ, ಖುಷಿ ಎಂಬ ಮಹಿಳೆ ಆತನಿಗೆ ಮೂರು ತಿಂಗಳ ಬಾಡಿಗೆಯಾದ 1,500 ರೂಪಾಯಿಗಳನ್ನು ಕಳುಹಿಸಿ ಶುಭ ಹಾರೈಸಿದ್ದಾರೆ. ಜೊತೆಗೆ ಇನ್ನೂ ಅನೇಕರು ತಾವು ನೆರವು ನೀಡಲು ಸಿದ್ದ ಎಂದು ಹೇಳಿದ್ದಾರೆ.