ಬೆಂಗಳೂರು: ಕಾರ್ಕಳ ಥೀಮ್ ಪಾರ್ಕ್ ಹಗರಣ, ನಕಲಿ ಪರಶುರಾಮ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಸುನೀಲ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು, ಬಿಜೆಪಿ ಶಾಸಕ ಸುನೀಲ್ ಕುಮಾರ್ ಕಾರ್ಕಳ ಥೀಮ್ ಪಾರ್ಕ್ ನಲ್ಲಿ ನಕಲಿ ಪರಶುರಾಮ ಮೂರ್ತಿ ಪ್ರತಿಷ್ಠಾಪಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ತಕ್ಷಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಶಾಸಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸುನೀಲ್ ಕುಮಾರ್ ಸುಳ್ಳನ್ನ ನೂರು ಬಾರಿ ಹೇಳಿ ನಿಜ ಮಾಡಲು ಹೊರಟಿದ್ದಾರೆ. ಉಡುಪಿಯ ಕಾರ್ಕಳದಲ್ಲಿ ನಕಲಿ ಪರಶುರಾಮ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಒಂದು ಮೂರ್ತಿ ನಿರ್ಮಾಣಕ್ಕೆ ಎಷ್ಟು ಸಮಯಬೇಕೆಂಬುದು ನನಗೂ ಗೊತ್ತು. ನಾನು ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ನಿರ್ಮಿಸಿದ್ದೇನೆ. ಶಾಸಕ ಸುನೇಲ್ ಕುಮಾರ್ ಕೇವಲ 3 ತಿಂಗಳಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಕಂಚಿನ ಪರಶುರಾಮ ಪ್ರತಿಮೆ ನಿರ್ಮಿಸಿದ್ದಾರೆ. ಇಂಥ ಪ್ರತಿಮೆಗಳನ್ನು ನಿರ್ಮಿಸುವಾಗ ವರ್ಷಾನುಗಟ್ಟಲೆ ಸಮಯ ಹಿಡಿಯುತ್ತದೆ. ಚುನಾವಣೆಗಾಗಿ ಕೇವಲ ಮೂರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಮುಗಿಸಿದ್ದು ಅಚ್ಚರಿಯಾಗಿದೆ. ಪರಶುರಾಮನ ನಕಲಿ ಪ್ರತಿಮೆ ಸ್ಥಾಪಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಬಂಡಾರಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಂಸದ ಜಯಪ್ರಕಾಶ್ ಹೆಗಡೆ, ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜ, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಮಿಥುನ್ ರೈ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.