ಬೆಂಗಳೂರು: ಎತ್ತರ ಕಡಿಮೆ ಎನ್ನುವ ನೆಪವೊಡ್ಡಿ ಸಾರಿಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಪಿ. ಮಂಜುನಾಥ್ ಅವರಿಗೆ ಬಡ್ತಿ ನೀಡದೆ ಅವರ ಮನವಿ ತಿರಸ್ಕರಿಸಿದ್ದ ಸರ್ಕಾರದ ಕ್ರಮವನ್ನು ಹೈಕೋರ್ಟ್ ರದ್ದು ಮಾಡಿದೆ.
ನೇರ ನೇಮಕವಾದವರಿಗೆ ಅನ್ವಯವಾಗದ ಎತ್ತರದ ನಿಯಮ ಅರ್ಜಿದಾರರಿಗೆ ಅನ್ವಯಿಸಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದದ ವಿಭಾಗೀಯ ಪೀಠದಲ್ಲಿ ಬೆಂಗಳೂರಿನ ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಲಾಗಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಸತೀಶ್ ಕೆ. ಭಟ್, ಸುಪ್ರೀಂ ಕೋರ್ಟ್ 2022ರಲ್ಲಿ ನೀಡಿದ ಮಧ್ಯಂತರ ಆದೇಶದಂತೆ ಅರ್ಜಿದಾರರು ಬಡ್ತಿಗೆ ಅರ್ಹರಾಗಿದ್ದಾರೆ. ಹಾಗಾಗಿ ಅವರಿಗೆ ಬಡ್ತಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು. ಇಲಾಖೆಯಲ್ಲಿ ಶೇಕಡ 5ರಷ್ಟು ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ. ಆ ರೀತಿ ನೇರ ನೇಮಕ ಆಗುವವರಿಗೆ ಎತ್ತರದ ಮಾನದಂಡ ನಿಗದಿಪಡಿಸಿಲ್ಲ. ಹಾಗಾಗಿ ಅವರಿಗೆ ಅನ್ವಯಿಸುವ ನಿಯಮವನ್ನು ಅರ್ಜಿದಾರರಿಗೂ ಅನ್ವಯಿಸಬೇಕು ಎಂದು ಕೋರಿದ್ದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ ಅರ್ಜಿದಾರರಿಗೆ ನೇರ ನೇಮಕಾತಿಗೆ ವಿಧಿಸಿರುವ ಮಾನದಂಡಗಳ ಅನುಸಾರ ಒಂದು ತಿಂಗಳೊಳಗೆ ಬಡ್ತಿ ನೀಡಬೇಕು. ಆ ಬಡ್ತಿ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವ ವಿಶೇಷ ಮೇಲ್ಮನವಿಯ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.