ಬೀದರ್: ಶಾಲೆಗಳು ಮತ್ತು ಉದ್ಯಾನವನಗಳಲ್ಲಿ ಮದ್ಯ ಸೇವಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣ ಶಾಲೆಯ ಸುತ್ತ ಮದ್ಯ ಮಾರಾಟ ಕುರಿತು ಮಕ್ಕಳು ಮನವಿ ಸಲ್ಲಿಸಿದ್ದಾರೆ. ಕ್ರಮಕ್ಕೆ ಈಗಾಗಲೇ ಜಿಲ್ಲಾಧಿಕಾರಿ ಮತ್ತು ಎಸ್.ಪಿ.ಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮದ್ಯ ಸೇವನೆ ಮಾಡುವ ಗ್ರಾಹಕರ ಸಂಖ್ಯೆ ಮತ್ತು ಬೇಡಿಕೆ ಹೆಚ್ಚಾಗಿದೆ. ಸದ್ಯ ಮದ್ಯದ ಅಂಗಡಿಗಳ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಎಲ್ಲೆಂದರಲ್ಲಿ ಜನ ಮದ್ಯ ಸೇವನೆ ಮಾಡುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಸಿಎಲ್ -7 ಹೆಚ್ಚಿಗೆ ಕೊಡುತ್ತಿದ್ದೇವೆ. ಹೊರಗಡೆ ಕುಡಿಯುವುದನ್ನು ನಿಯಂತ್ರಣ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದ್ದಾರೆ.
ಉದ್ಯಾನವನಗಳು ಇರುವುದು ವಾಯುವಿಹಾರಕ್ಕೆ ಮಾತ್ರ. ಅಂತಹ ಸ್ಥಳದಲ್ಲಿ ಮದ್ಯ ಸೇವನೆ ಮಾಡುವುದರಿಂದ ವಾತಾವರಣ ಕಲುಷಿತವಾಗುತ್ತಿದೆ. ಇದು ಸಾರ್ವಜನಿಕ ಸ್ಥಳವಾಗಿದೆ. ಅದರ ಪವಿತ್ರತೆ ಕಾಯ್ದುಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಮದ್ಯ ಸೇವನೆ ಮಾಡುವುದು ಗಮನಕ್ಕೆ ಬಂದರೆ ಪೊಲೀಸರಿಗೆ ದೂರು ನೀಡಬಹುದು ಎಂದು ಹೇಳಿದ್ದಾರೆ.