ಬೆಂಗಳೂರು: ನಾದಬ್ರಹ್ಮ ಎಂದೇ ಖಾತಿ ಪಡೆದಿರುವ ಸಂಗೀತ ನಿರ್ದೇಶಕ ಹಂಸಲೇಖ ಆಗಾಗ ವಿವಾದಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ಅವರು ಜೈನ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆಯೊಂದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಜೈನ ಸಮುದಾಯದವರು ಹಂಸಲೇಖ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ. ಬಾಯಿ ತಪ್ಪಿನಿಂದ ಆ ಮಾತು ಆಡಿದ್ದೆ. ಇದನ್ನು ಇಲ್ಲಿಗೆ ಬಿಡಿ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಹಂಸಲೇಖ, ‘ಜೈನರ ಫಿಲಾಸಫಿಯಲ್ಲಿ 24 ಜನ್ಮಗಳು ಇವೆಯಂತೆ. ಅದೆಲ್ಲವೂ ಸುಳ್ಳು, ಬುಲ್ ಶಿಟ್’ ಎಂದು ಹೇಳಿದ್ದರು. ಹಂಸಲೇಖ ಹೇಳಿಕೆಗೆ ಜೈನರು ವಿರೋಧ ವ್ಯಕ್ತಪಡಿಸಿದ್ದರು. ಜೈನ ಧರ್ಮಕ್ಕೆ ಅಪಮಾನ ಮಾಡಿದ್ದು ಸರಿಯಲ್ಲ, ಜಗತ್ತಿನ ಅತಿದೊಡ್ಡ ಅಹಿಂಸಾ ಧರ್ಮ, ಧಾನಧರ್ಮಗಳಿಗೆ ಶ್ರೇಷ್ಠತೆ ಪಡೆದ ಜೈನ ದರ್ಮದವನ್ನು ಹಂಸಲೇಖ ಟೀಕಿಸಿರುವುದು ಖಂಡನೀಯ. ಸಾರ್ವಜನಿಕವಾಗಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಹಂಸಲೇಖ, ತಮ್ಮ ಹೇಳಿಕೆಗೆ ಕ್ಷಮೆ ಕೇಳಿ ವಿವರಣೆಯನ್ನೂ ನೀಡಿದ್ದಾರೆ. ಅದು ಬಾಯಿತಪ್ಪಿನಿಂದ ಆಡಿದ ಮಾತು. ಇನ್ಮುಂದೆ ಇಂತಹ ತಪ್ಪು ಮಾಡಲ್ಲ. ದಯಮಾಡಿ ಕ್ಷಮಿಸಿ. ಜೈನ ಧರ್ಮದ ವಿರುದ್ಧ ಮಾತನಾಡಬೇಕು, ಆ ಪದ ಬಳಕೆ ಮಾಡಬೇಕು ಎಂದು ಮಾಡಿಲ್ಲ. ಅಂದು ನಾನಿದ್ದ ಜಾಗದಲ್ಲಿ ಎಲ್ಲರೂ ಎಳೆದಾಡುತ್ತಿದ್ದರು. ಅವರಿಗೆ ಗದರೋಕೆ ಹೋಗಿ ಈಕಡೆ ಬಂದೆ. ಆ ಮಾತು ಬಂದಿದ್ದು ತಪ್ಪಾಯ್ತು. ನಾನು ಪಂಪನ ದಾಸಾನು ದಾಸ. ಕನ್ನಡ ಕಟ್ಟಿದ ಆ ಮಹಾನ್ ವ್ಯಕ್ತಿಯ ಸೇವೆಗೆ ನಿಂತಿದ್ದೇನೆ. ಇದನ್ನು ದಯಮಾಡಿ ಬೆಳಸಬೇಡಿ ಎಂದು ಪೋಸ್ಟ್ ಮಾಡಿದ್ದಾರೆ.