ನವದೆಹಲಿ: ಸಿಬಿಐ ತನಿಖೆಗೆ ಮುನ್ನ ರಾಜ್ಯ ಸರ್ಕಾರಗಳ ಅನುಮತಿ ಪಡೆಯಬೇಕೆಂದು ಮಧ್ಯಪ್ರದೇಶ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ತನಿಖಾ ಸಂಸ್ಥೆಗಳ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದು ಬಿಜೆಪಿ ಹೊರತಾದ ಪಕ್ಷಗಳ ಆರೋಪವಾಗಿದೆ. ಬಿಜೆಪಿ ವಿರೋಧಿ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಸಿಬಿಐ ತನಿಖೆಗೆ ಮುನ್ನ ಅನುಮತಿ ಪಡೆಯುವ ನಿಯಮ ಜಾರಿಗೊಳಿಸಿವೆ.
ತಮಿಳುನಾಡು, ಪಶ್ಚಿಮ ಬಂಗಾಳ, ಪಂಜಾಬ್, ಜಾರ್ಖಂಡ್, ಕೇರಳದಂತಹ ರಾಜ್ಯಗಳಲ್ಲಿ ಸಿಬಿಐ ತನಿಖೆಗೆ ಮೊದಲು ರಾಜ್ಯ ಸರ್ಕಾರಗಳ ಒಪ್ಪಿಗೆ ಪಡೆದುಕೊಳ್ಳಬೇಕಿದೆ. ಇದೀಗ ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿಯೂ ಅಂತಹ ಆದೇಶ ಹೊರಡಿಸಲಾಗಿದೆ.
ಈ ಸಂಬಂಧ ಮಧ್ಯಪ್ರದೇಶ ರಾಜ್ಯ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ. ಆದೇಶದ ಪ್ರಕಾರ ತನಿಖಾ ಸಂಸ್ಥೆಯು ಖಾಸಗಿ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು ಅಥವಾ ರಾಜ್ಯದೊಳಗಿನ ಯಾವುದೇ ಇತರೆ ಸಂಸ್ಥೆಗಳನ್ನು ತನಿಖೆ ಮಾಡಲು ರಾಜ್ಯ ಸರ್ಕಾರದ ಲಿಖಿತ ಅನುಮತಿಯನ್ನು ಪಡೆಯಬೇಕಿದೆ. ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಆದೇಶ ಜಾರಿಗೆ ಬಂದಿದೆ.
ಇಷ್ಟು ದಿನ ಬಿಜೆಪಿ ವಿರೋಧಿ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಈ ನಿಯಮ ಇತ್ತು. ಇದೀಗ ಬಿಜೆಪಿ ಆಡಳಿತದಲ್ಲಿ ಇರುವ ಮಧ್ಯಪ್ರದೇಶ ಸರ್ಕಾರ ಕೂಡ ಇಂತಹ ಅಧಿಸೂಚನೆ ಹೊರಡಿಸಿರುವುದು ಕೇಂದ್ರ ಬಿಜೆಪಿಗೆ ನುಂಗಲಾರದ ತುತ್ತಾಗಿದೆ ಎನ್ನಲಾಗಿದೆ.