ಕಚೋರಿ ತಿನ್ನುವ ಮನಸಾಗಿದ್ದರೆ ಆಲೂಗಡ್ಡೆ ಈರುಳ್ಳಿ ಕಚೋರಿ ಮಾಡಿ ತಿನ್ನಿ. ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ತಿಂಡಿಯಲ್ಲಿ ಇದು ಕೂಡ ಒಂದು.
ಆಲೂಗಡ್ಡೆ-ಈರುಳ್ಳಿ ಕಚೋರಿಗೆ ಬೇಕಾಗುವ ಸಾಮಗ್ರಿ : 250 ಗ್ರಾಂ ಮೈದಾಹಿಟ್ಟು, 2 ಬೇಯಿಸಿದ ಆಲೂಗಡ್ಡೆ, ಸಣ್ಣಗೆ ಕತ್ತರಿಸಿದ ಈರುಳ್ಳಿ, ಅರ್ಧ ಚಮಚ ಕಡಲೆ ಹಿಟ್ಟು. 1 ಚಮಚ ಸೋಂಪು, ಒಂದು ಚಮಚ ಧನಿಯಾ ಪುಡಿ, 1 ಚಮಚ ಮಾವಿನ ಪುಡಿ, 1 ಚಮಚ ಗರಂ ಮಸಾಲೆ, 1 ಚಮಚ ಕೆಂಪು ಮೆಣಸಿನ ಕಾಯಿ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಎಣ್ಣೆ.
ಆಲೂಗಡ್ಡೆ-ಈರುಳ್ಳಿ ಕಚೋರಿ ಮಾಡುವ ವಿಧಾನ : ಮೊದಲು ಒಂದು ಪಾತ್ರೆಗೆ ಮೈದಾಹಿಟ್ಟು, ಉಪ್ಪು, ಸ್ವಲ್ಪ ಎಣ್ಣೆ ಹಾಗೂ ನೀರು ಹಾಕಿ ನಾದಿಕೊಳ್ಳಿ.
ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗ್ತಿದ್ದಂತೆ ಈರುಳ್ಳಿಯನ್ನು ಹಾಕಿ. ಈರುಳ್ಳಿ ಗೋಲ್ಡನ್ ಕಲರ್ ಬರ್ತಾ ಇದ್ದಂತೆ ಇದಕ್ಕೆ ಕಡಲೆಹಿಟ್ಟು, ಸೋಂಪು, ಧನಿಯಾ, ಮಾವಿನ ಪುಡಿ, ಗರಂ ಮಸಾಲೆ ಹಾಗೂ ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಮಿಕ್ಸ್ ಮಾಡಿ. ನಂತ್ರ ಆಲೂಗಡ್ಡೆಯನ್ನು ಸಣ್ಣಗೆ ಕಟ್ ಮಾಡಿ ಈ ಮಿಶ್ರಣಕ್ಕೆ ಹಾಕಿ. ಮತ್ತೆರಡು ನಿಮಿಷ ಕೈ ಆಡಿಸಿ.
ನಾದಿರುವ ಮೈದಾ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಅದನ್ನು ಸಣ್ಣಗೆ ತಟ್ಟಿಕೊಂಡು ಕಚೋರಿ ಆಕಾರದಲ್ಲಿ ಮಾಡಿಕೊಂಡು ಅದರೊಳಗೆ ಆಲೂಗಡ್ಡೆ ಮಿಶ್ರಣವನ್ನು ತುಂಬಿ ಮಿಶ್ರಣ ಹೊರಬರದಂತೆ ಎಲ್ಲ ಕಡೆ ಸರಿಯಾಗಿ ಅಂಟಿಸಿ. ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತ್ರ ಕಚೋರಿ ಮಿಶ್ರಣವನ್ನು ಹಾಕಿ ಕರಿಯಿರಿ. ಮಳೆಗಾಲದಲ್ಲಿ ಬಿಸಿಬಿಸಿ ಕಚೋರಿ ಸವಿಯಲು ಸಿದ್ಧ.