ಬೆಂಗಳೂರು : ಚುನಾವಣೆಯ ಆಸ್ತಿ ಘೋಷಣೆಯಲ್ಲಿ ಈ ಜಮೀನಿನ ಘೋಷಣೆಯೇ ಇಲ್ಲವಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್ ನೀಡಿದೆ. ಈ ಮುಡಾ ಬಜಾರ್ ವಿದ್ಯೆಯನ್ನು ಜನಸಾಮಾನ್ಯರಿಗೂ ಹೇಳಿಕೊಟ್ಟು ಅವರನ್ನೂ ಕೋಟ್ಯಾಧಿಪತಿಗಳನ್ನಾಗಿ ಮಾಡಿ ಸ್ವಾಮಿ ಎಂದು ಬಿಜೆಪಿ ಟೀಕಿಸಿದೆ.
ಟ್ವೀಟ್ ಮಾಡಿರುವ ಬಿಜೆಪಿ 3 ಎಕರೆ ಜಮೀನು ಕೊಟ್ಟು 2 ಸೈಟು ಪಡೆಯುವ ಜಾಗದಲ್ಲಿ 14 ಸೈಟು ಪಡೆದಿದ್ದೀರಲ್ಲ 2013ರ ಚುನಾವಣೆಯ ಆಸ್ತಿ ಘೋಷಣೆಯಲ್ಲಿ ಈ ಜಮೀನಿನ ಘೋಷಣೆಯೇ ಇಲ್ಲವಲ್ಲ 2018ರಲ್ಲಿ ಈ ಜಮೀನಿನ ಬೆಲೆ 25 ಲಕ್ಷ ಅಂತ ನಮೂದಿಸಿದ್ದೀರಲ್ಲ 2023ರಲ್ಲಿ 8.33 ಕೋಟಿ ಅಂತ ಹೇಳಿದ್ದೀರಲ್ಲ ಆದರೆ ಈಗ, ಒಂದೇ ವರ್ಷದಲ್ಲಿ ಆಸ್ತಿ ಬೆಲೆ ದುಪ್ಪಟ್ಟು ಅಂದ್ರೂ ಆಗದ 65 ಕೋಟಿಯನ್ನು ಕೊಟ್ಟು ಬಿಡಿ ಅಂತಿದ್ದೀರಲ್ಲ, ಈ ಮುಡಾ ಬಜಾರ್ ವಿದ್ಯೆಯನ್ನು ಜನಸಾಮಾನ್ಯರಿಗೂ ಹೇಳಿಕೊಟ್ಟು ಅವರನ್ನೂ ಕೋಟ್ಯಾಧಿಪತಿಗಳನ್ನಾಗಿ ಮಾಡಿ ಸ್ವಾಮಿ ಎಂದು ಬಿಜೆಪಿ ಟೀಕಿಸಿದೆ.
ನಾಡಿನ ದೀನ-ದಲಿತರಿಗೆ ಸೇರಬೇಕಾದ ಹಣ, ಭೂಮಿಯನ್ನು ನುಂಗಿ ನೀರು ಕುಡಿಯುತ್ತಿರುವ ಸರ್ಕಾರಕ್ಕೆ ಜನರ ಕಷ್ಟವನ್ನು ಆಲಿಸಲು ಸಮಯವೇ ಇದ್ದಂತಿಲ್ಲ. ಗುರುಮಠಕಲ್ ನ ಕಾಕಲವಾರ ಗ್ರಾಮದ 9 ಮಂದಿ ಕಲುಷಿತ ನೀರು ಸೇವಿಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರೆ, ಇತ್ತ ಐಟಿಬಿಟಿ ಗ್ರಾಮೀಣ ಅಭಿವೃದ್ಧಿ ಸಚಿವ
ಪ್ರಿಯಾಂಕ್ ಖರ್ಗೆಅವರು ಖುರ್ಚಿ ಗಲಾಟೆಯಲ್ಲಿ ನಿರತರಾಗಿದ್ದಾರೆ. ತಮ್ಮ ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕನಿಷ್ಠ ಯೋಗ್ಯತೆ ಕೂಡ ಇವರಿಗಿಲ್ಲ. ಯಾವ ನಾಚಿಕೆಯೂ ಇಲ್ಲದೆ, ಗ್ರಾಮೀಣ ಅಭಿವೃದ್ಧಿಯ ಹೊಣೆಯನ್ನೂ ಹೊತ್ತಿರುವ ಪ್ರಿಯಾಂಕ್ ಖರ್ಗೆ ಅವರು, ತಮ್ಮ ರಾಜಕೀಯ ಪುರೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆಯೇ ಹೊರತು, ಕ್ಷೇತ್ರದ ಜನರ ಸಂಕಷ್ಟಕ್ಕೆ ಮಿಡಿಯುವ ಯಾವ ಗೋಜಿಗೂ ಹೋಗುತ್ತಿಲ್ಲ ಎಂದು ಬಿಜೆಪಿ ಕಿಡಿಕಾರಿದೆ.