ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ‘ಎನಿವೇರ್ ನೋಂದಣಿ’ ವ್ಯವಸ್ಥೆಯನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ನೋಂದಣಿ ಇಲಾಖೆಯನ್ನು ಜನಸ್ನೇಹಿ ಮಾಡುವ ನಿಟ್ಟಿನಲ್ಲಿ ಆಗಸ್ಟ್ ನಿಂದ ಪ್ರತಿ ಜಿಲ್ಲೆಗಳಿಗೂ ಹಂತ ಹಂತವಾಗಿ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಗೆ ತರುವಂತೆ ತಿಳಿಸಿದರು.
ಉಪನೋಂದಣಾಧಿಕಾರಿ ಕಚೇರಿ ಎಂದರೆ ಜನದಟ್ಟಣೆ ಸಾಮಾನ್ಯ ಎಂಬಂತಾಗಿದೆ. ಜನಸಾಮಾನ್ಯರನ್ನು ಸರ್ಕಾರಿ ಕಚೇರಿಗಳಲ್ಲಿ ಕಾಯಿಸುವುದೂ ಒಂದು ರೀತಿಯಲ್ಲಿ ಶೋಷಣೆ. ಇದೇ ಕಾರಣಕ್ಕೆ ಬೆಗಳೂರಿನಲ್ಲಿ ಈಗಾಗಲೇ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಯಾಗಿದೆ. ಇದನ್ನು ಮುಂದಿನ ತಿಂಗಳಿಂದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂದರು.
ಪ್ರಾಯೋಗಿಕವಾಗಿ ಬೆಳಗಾವಿ, ತುಮಕೂರು ಜಿಲ್ಲೆಗಳಲ್ಲಿ ಮಾರ್ಚ್ 14ರಿಂದ ಈ ವ್ಯವಸ್ಥೆ ಜಾರಿಯಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ತಲಾ 4 ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಪರಿಚಯಿಸಿ. ನಂತರದ ದಿನಗಳಲ್ಲಿ 8 ಜಿಲ್ಲೆಗಳಿಗೆ ಏರಿಸಿ. ವರ್ಷಾಂತ್ಯದೊಳಗೆ ಎಲ್ಲಾ ಜಿಲ್ಲೆಗಳಲ್ಲಿಯೂ ಈ ವ್ಯವಸ್ಥೆ ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.