ಬೆಳಗಾವಿ: ನೀಟ್ ಪರೀಕ್ಷೆ ವಿವಾದ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ನಡುವೆಯೇ ನೀಟ್ ಪರೀಕ್ಷೆ ಹೆಸರಲ್ಲಿ ವ್ಯಕ್ತಿಯೋರ್ವ ವಿದ್ಯಾರ್ಥಿಗಳಿಗೆ ವಂಚಿಸುತ್ತಿದ್ದ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದರೂ ಮೆಡಿಕಲ್ ಸೀಟ್ ಕೊಡಿಸುವುದಾಗಿ ಹೇಳಿ ನಂಬಿಸಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾನೆ ವಂಚಕ. ಹೈದರಾಬಾದ್ ಮೂಲದ ಅರವಿಂದ್ ಅರಗೊಂಡ ಎಂಬಾತ ಬರೋಬ್ಬರಿ 1 ಕೋಟಿ 8 ಲಕ್ಷ ರೂಪಾಯಿ ವಂಚಿಸಿ ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ದಾನೆ.
ಸದ್ಯ ಆರೋಪಿ ಅರವಿಂದ ಅರಗೊಂಡನನ್ನು ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅರವಿಂದ ಅರಗೊಂಡ ಬೆಳಗಾವಿ ನಗರದಲ್ಲಿಯೇ ಹಲವು ವಿದ್ಯಾರ್ಥಿಗಳನ್ನು ನಂಬಿಸಿ ವಂಚಿಸಿದ್ದ. ಬೆಳಗಾವಿ ಮೂಲದ ವಿದ್ಯಾರ್ಥಿಯ ತಾಯಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 12 ಲಕ್ಷ ರೂಪಾಯಿ ನಗದು, 12 ಕಂಪ್ಯೂಟರ್, ಒಂದು ಲ್ಯಾಪ್ ಟಾಪ್ ಜಪ್ತಿಮಾಡಲಾಗಿದೆ.