ವಿಜಯಪುರ : ಶಾಲೆಯ ಸಭೆ, ಸಮಾರಂಭಗಳಲ್ಲಿ ಹಾರ ತುರಾಯಿ, ಶಾಲು, ನೆನಪಿನ ಕಾಣಿಕೆ ನಿಷೇಧಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ಬಗ್ಗೆ ಎನ್. ಹೆಚ್ ನಾಗೂರ , ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯಪುರ ಇವರು ಆದೇಶ ಹೊರಡಿಸಿದ್ದು, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ವಿಜಯಪುರ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನಡೆಸಲಾಗುವ ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಮತ್ತು ಇತರೆ ಉದ್ಘಾಟನಾ ಸಮಾರಂಭಗಳಲ್ಲಿ ಅನಗತ್ಯವಾಗಿ ಹಣವನ್ನು ಖರ್ಚು ಮಾಡಿ ಹಾರ, ಶಾಲು ನೆನಪಿನ ಕಾಣಿಕೆಗಳನ್ನು ತಂದು ಸನ್ಮಾನ ಮಾಡುವುದರಲ್ಲಿ ಸಮಯ ವ್ಯರ್ಥ ಮಾಡಬೇಡಿರಿ.
ಸನ್ಮಾನ ಮತ್ತು ಇತರೆ ನೆನಪಿನ ಕಾಣಿಕೆಗಳಿಗೆ ತಗಲುವ ಮೊತ್ತವನ್ನು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ಸಾಮಗ್ರಿಗಳನ್ನು ಒದಗಿಸಲು ಹಾಗೂ ಸರ್ಕಾರಿ ಶಾಲೆಗೆ ಬೇಕಾಗಿರುವ ಕಲಿಕೆಗೆ ಪೂರಕ ಶೈಕ್ಷಣಿಕ ವಸ್ತುಗಳನ್ನು ದೇಣಿಗೆ ನೀಡಲು ಸೂಚನೆ ನೀಡಿದ್ದಾರೆ.
ಆದ್ದರಿಂದ ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನಡೆಸಲಾಗುವ ಶಾಲಾ ಶೈಕ್ಷಣಿಕ ಮತ್ತು ಇತರೆ ಉದ್ಘಾಟನಾ ಸಮಾರಂಭಗಳಲ್ಲಿ ಹಾರ ಹಾಗೂ ಶಾಲು ಇತ್ಯಾದಿ ವಸ್ತುಗಳಿಂದ ಸನ್ಮಾನ ಮಾಡುವುದನ್ನು ಕಡ್ಡಾಯವಾಗಿ ನಿಷೇದಿಸಿದೆ. ಮಾನ್ಯ ಸಚಿವರ ನಿರ್ದೇಶನವನ್ನು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಸ್ಥರು ಪಾಲಿಸಲು ತಿಳಿಸಿದೆ ಎಂದು ಸುತ್ತೋಲೆ ಹೊರಡಿಸಿದ್ದಾರೆ.