ಮುಂಬೈ: ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಸಿಎ ಪರೀಕ್ಷೆಯನ್ನು ತರಕಾರಿ ಮಾರುವ ಮಹಿಳೆಯೊಬ್ಬರ ಮಗ ಯಾವುದೇ ಕೋಚಿಂಗ್ ಇಲ್ಲದೇ ಪಾಸ್ ಮಾಡಿದ್ದು, ಮಗನ ಸಧಾನೆ ಕಂಡು ಮಹಿಳೆ ಖುಷಿಯಿಂದ ಭಾವುಕರಾಗಿದ್ದಾರೆ.
ಸಿಎ ಪರೀಕ್ಷೆಗಾಗಿ ಅಭ್ಯರ್ಥಿಗಳು ಹಲವು ವರ್ಷಗಳ ಕಠಿಣ ಪರಿಶ್ರಮ, ನಿರಂತರ ಓದು, ಕೋಚಿಂಗ್ ಕ್ಲಾಸ್ ಗಳಿಗೆ ಸೇರುತ್ತಾರೆ. ಆದರೂ ಸಿಎ ಪರೀಕ್ಷೆ ಪಾಸು ಮಾಡುವವರು ವಿರಳ. ಇಂತಹ ಸಂದರ್ಭದಲ್ಲಿ ಮುಂಬೈನ ತರಕಾರಿ ಮಾರುವ ಬಡ ಮಹಿಳೆಯ ಮಗ ಸಿಎ ಪಾಸ್ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.
ಕಠಿಣ ಪರಿಶ್ರಮ, ಇಚ್ಛಾಶಕ್ತಿ, ಗುರಿ ಇದ್ದರೆ ಎಂಥಹ ಪರೀಕ್ಷೆಯನ್ನಾದರೂ ಎದುರಿಸಿ ಗೆಲ್ಲಬಹುದು ಎಂಬುದಕ್ಕೆ ಈ ಯುವಕ ಯೋಗೇಶ್ ಸಾಕ್ಷಿ. ಯೋಗೇಶ್ ಅವರ ಅಮ್ಮ ಥೋಂಬರೆ ಮವಶಿ ಮುಂಬೈನ ಡೊಂಬಿವ್ಲಿ ಪೂರ್ವದ ಗಾಂಧಿನಗರದಲ್ಲಿರುವ ಗಿರ್ನಾರ್ ಮಿಠಾಯಿ ಶಾಪ್ ಬಳಿ ತರಕಾರಿ ಮಾರಿ ಜೀವನ ಸಾಗಿಸುತ್ತಾರೆ.
ಹೀಗೆ ತರಕಾರಿ ಮಾರುತ್ತಿದ್ದ ಥೋಂಬರೆ ಮವಶಿ ಅವರಿಗೆ ಮಗ ಬಂದು ತಾನು ಸಿಎ ಪರೀಕ್ಷೆ ಪಾಸ್ ಆಗಿದ್ದೇನೆ. ಚಾರ್ಟೆಡ್ ಅಕೌಂಟೆಂಟ್ ಎಂದು ಹೇಳುತ್ತಿದ್ದಂತೆ ಅಮ್ಮನ ಖುಷಿಗೇ ಪಾರವೇ ಇಲ್ಲ….ಸಂತೋಷಕ್ಕೆ ಮಗನನ್ನು ತಬ್ಬಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಯೋಗೇಶ್ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಾಧನೆ ಮಾಡಬೇಕು ಎಂಬ ಛಲ, ಒಳ್ಳೆಯ ದಾರಿ ಆಯ್ಕೆ ಮಾಡಿಕೊಂಡರೆ ಪರಿಶ್ರಮಕ್ಕೆ ಅತ್ಯುತ್ತಮ ಫಲ ಸಿಗುತ್ತದೆ ಎಂದು ನೆಟ್ಟಿಗರು ಯೋಗೇಶ್ ಗೆ ಶುಭ ಹಾರೈಸಿದ್ದಾರೆ.