
ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ ಯನ್ನು ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆಯಾಗಿಸುವ ಬಗ್ಗೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಇಟಿ ಸಂರಚನೆ ಬಗ್ಗೆ ಅಧ್ಯಯನ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ನರಸಿಂಹರಾಜು ನೇತೃತ್ವದ ಸಮಿತಿ ರಚಿಸಲಾಗಿದೆ. ಸಿಇಟಿ ಮಾದರಿಯನ್ನು ಬದಲಾಯಿಸುವಾಗಲೂ ಈ ಸಮಿತಿ ಶಿಫಾರಸು ಸಲ್ಲಿಸಲಿದೆ ಎಂದು ಹೇಳಿದ್ದಾರೆ.
ಈಗಾಗಲೇ ಸಿಇಟಿಯನ್ನು ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆಯಾಗಿಸುವ ಬಗ್ಗೆ ಮಹಾರಾಷ್ಟ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಅಧ್ಯಯನ ನಡೆಸಲಾಗಿದೆ. ಸಿಇಟಿಯನ್ನು ಕಂಪ್ಯೂಟರ್ ಆಧರಿಸಿ ನಡೆಸಲು ಹೆಚ್ಚಿನ ಮೂಲಸೌಕರ್ಯ ಬೇಕಿದೆ. ಸರ್ಕಾರದಿಂದ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಗ್ರಾಮೀಣ ಮಕ್ಕಳನ್ನು ಗಮನದಲ್ಲಿರಿಸಿಕೊಳ್ಳಬೇಕಿದೆ. ಸಿಇಟಿ ಅರ್ಜಿ ಸಲ್ಲಿಸುವಾಗಲೇ ಅನೇಕ ಲೋಪ ಆಗುತ್ತಿವೆ. ಸಾಧಕ- ಬಾಧಕಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.