ಬೆಂಗಳೂರು: ಸಿಇಟಿಯಲ್ಲಿ ಇನ್ನು ಮುಂದೆ ಪಠ್ಯೇತರ ಪ್ರಶ್ನೆಗಳನ್ನು ಕೂಡ ಕೇಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಇನ್ನು ಮುಂದೆ ಸಿಇಟಿಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೂಡ ಕೇಳಲಿದ್ದು, ವಿದ್ಯಾರ್ಥಿಗಳು ಅವರ ಬುದ್ಧಿ ಶಕ್ತಿ ಬಳಸಿ ಆ ಪ್ರಶ್ನೆಗಳಿಗೆ ಉತ್ತರ ಬರೆಯಬೇಕಿದೆ. 2025 ನೇ ಸಾಲಿನ ಸಿಇಟಿಯಲ್ಲಿ ಪಠ್ಯೇತರ ಪ್ರಶ್ನೆ ಕೇಳುವ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಪ್ರಶ್ನೆ ಪತ್ರಿಕೆ ತಯಾರಿತರಿಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಗತ್ಯ ಮಾರ್ಗಸೂಚಿ ನೀಡಲಾಗುತ್ತದೆ. ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸಾರ್ವಜನಿಕರು ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದಾಗಿದೆ ಎಂದು ಹೇಳಿದ್ದಾರೆ.
ಸಿಇಟಿ ಅರ್ಜಿ ಸಲ್ಲಿಕೆ ಹಂತದಲ್ಲಿ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುತಿದ್ದಾರೆ. ಸೈಬರ್ ಸೆಂಟರ್ ಗಳಿಗೆ ಹೋಗಿ ಬಹುತೇಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದು, ಗ್ರಾಮೀಣ ವಿದ್ಯಾರ್ಹತೆ, ಮೀಸಲಾತಿ ಮೊದಲಾದ ಮಾಹಿತಿಗಳನ್ನು ನೀಡುವಾಗ ಹೆಚ್ಚಿನ ಪ್ರಮಾಣದಲ್ಲಿ ತಪ್ಪು ಎಸಗುತ್ತಿದ್ದಾರೆ. ಹಾಗಾಗಿ ಸಿಇಟಿ ಅರ್ಜಿ ಸಲ್ಲಿಕೆ ವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಪೂರ್ವ ತಯಾರಿ ನೀಡಲು ಅಪ್ಲಿಕೇಶನ್ ಸಿದ್ಧಪಡಿಸಲಾಗುತ್ತಿದೆ. ಇದು ಅಂತಿಮ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ. ಇದರೊಂದಿಗೆ ಕಾಲೇಜು ಹಂತದಲ್ಲಿ ಸಿಇಟಿ ಅರ್ಜಿ ಸಲ್ಲಿಕೆ ಮಾಡಿಸುವ ಉದ್ದೇಶವಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.