ಮಳೆಗಾಲದ ಸಮಯದಲ್ಲಿ ಜಲಪಾತಗಳು ಭೋರ್ಗರಿಯುತ್ತಿವೆ. ಇವುಗಳನ್ನು ವೀಕ್ಷಿಸಲು ತೆರಳುವ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದು, ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಇಂತಹ ಹಲವು ಘಟನೆಗಳು ಈಗಾಗಲೇ ನಡೆದಿವೆ.
ಹೀಗಾಗಿ ಕೆಲವೊಂದು ಸ್ಥಳಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಿದ್ದು, ಜಲಪಾತ ಅಥವಾ ನದಿಗೆ ಇಳಿಯದಂತೆ ಎಚ್ಚರಿಸುತ್ತಿದ್ದಾರೆ. ಇಷ್ಟಾದರೂ ಸಹ ಎಚ್ಚೆತ್ತುಕೊಳ್ಳದ ಪ್ರವಾಸಿಗರು ಉದ್ಧಟತನ ಮೆರೆಯುತ್ತಿದ್ದಾರೆ. ಅಂತಹ ಪ್ರವಾಸಿಗರಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಮೂಡುಗೆರೆ ತಾಲೂಕಿನ ಚಾರ್ಮಡಿ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ಜಲಪಾತಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಸಹ ಅದನ್ನು ಮೀರಿ ಜಲ ಕ್ರೀಡೆಯಾಡಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಅವರುಗಳ ಬಟ್ಟೆಯನ್ನು ಎತ್ತಿಕೊಂಡು ತಮ್ಮ ವ್ಯಾನಿಗೆ ಹಾಕಿಕೊಂಡಿದ್ದಾರೆ.
ಇದು ಗೊತ್ತಾಗುತ್ತಿದ್ದಂತೆ ಜಲಪಾತದಿಂದ ಮೇಲೇರಿ ಬಂದ ಈ ಪ್ರವಾಸಿಗರು ತಮ್ಮ ಉಡುಪುಗಳನ್ನು ವಾಪಸ್ ಕೊಡುವಂತೆ ಚಡ್ಡಿಯಲ್ಲೇ ಪೊಲೀಸರನ್ನು ಹಿಂಬಾಲಿಸಿ ಗೋಗರೆದಿದ್ದಾರೆ. ಒಂದಷ್ಟು ಸಮಯ ಆಟವಾಡಿಸಿದ ಪೊಲೀಸರು ಬಳಿಕ ಎಚ್ಚರಿಕೆ ನೀಡಿ ಉಡುಪುಗಳನ್ನು ವಾಪಸ್ ಕೊಟ್ಟಿದ್ದಾರೆ.