ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರ ನಡುವೆ ನಡೆದಿತ್ತು ಎನ್ನಲಾದ ರಹಸ್ಯ ಸಭೆ, ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೂ ಮೊದಲು ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯ ಹೋಟೆಲ್ ಒಂದರಲ್ಲಿ ರಹಸ್ಯ ಸಭೆ ನಡೆಸಿದ್ದರೆ? ಎಂಬ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಪುಷ್ಠಿ ನೀಡುವಂತಿದೆ ವೈರಲ್ ಆಗಿರುವ ಆಡಿಯೋ, ವಿಡಿಯೋಗಳು.
ಪ್ರಕರಣದ ಆರೋಪಿಗಳಾಗಿರುವ ನಿಗಮದ ಲೆಕ್ಕ ಪರಿಶೋಧಕ ಪರಶುರಾಮ್ ಹಾಗೂ ಎಂಡಿ ಪದ್ಮನಾಭ್ ನಡುವೆ ಮಾತುಕತೆ ನಡೆದಿದೆ. ಹೋಟೆಲ್ ಗೆ ಪದ್ಮನಾಭ್, ಪರಶುರಾಮ್ ಅವರನ್ನು ಕರೆಸಿಕೊಂಡು ಸಭೆ ಮಾಡಿದ್ದಾರೆ. ಮಾತುಕತೆ ವೇಳೆ ಹಗರಣದ ವಿಚಾರ ಅಧ್ಯಕ್ಷರಿಗೆ ಹೋಳೋಣವೇ? ಎಂದು ಪರಶುರಾಮ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪದ್ಮನಾಭ್, ಹೇಳಿದರೆ ರಾದ್ಧಾಂತವಾಗುತ್ತೆ. ಸ್ವಲ್ಪದಿನ ಬೇಡ ಎಂದು ಹೇಳಿದ್ದಾರೆ. ಇದಾದ ಎರಡೇ ದಿನದಲ್ಲಿ ಚಂದ್ರಶೇಖರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಗೆ ಶರಣಾಗಿದ್ದರು.
ಸಂಭಾಷಣೆಯ ವೇಳೆ ಪದ್ಮನಾಭ್, ಮಿನಿಸ್ಟರ್ ಕಡೆಯಿಂದ ಪ್ರೆಶರ್ ಬಂತು ನೆಕ್ಕಂಟಿ ನಾಗರಾಜ್ ಹೇಳಿದ್ರು ನಾವು ಮಾಡಿದ್ದೇವೆ ಎಂದಿದ್ದಾರೆ. ಅಧ್ಯಕ್ಷರ ಗಮನಕ್ಕೆ ತರುವುದು ಬೇಡ. ಗೊತ್ತಾದರೆ ದೊಡ್ಡ ರಾದ್ಧಾಂತವೇ ಆಗುತ್ತದೆ ಎಂದಿದ್ದಾರೆ. ಇದಕ್ಕೆ ಲೆಕ್ಕ ಪರಿಶೋಧಕ ಪರಶುರಾಮ್ ಇದರಿಂದ ಹೊರಬರುವುದು ಹೇಗೆ? ನಿಮ್ಮನ್ನೇ ನಂಬಿದ್ದೀನಿ ಎಂದಿದ್ದಾರೆ.
ಒಟ್ಟಾರೆ ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅವ್ಯವಹಾರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.