ಬೆಂಗಳೂರು : ಸೈಟ್ ಕೊಡಲು ಕಷ್ಟ ಆದ್ರೆ ಜಮೀನಿನ ಮೌಲ್ಯ 60 ಕೋಟಿ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಮ್ಮ 3.16 ಎಕರೆ ಜಮೀನನ್ನು ಅಕ್ರಮ ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ಮಾಡಿ ಹಂಚಿದರೆ ನಾವು ಕೇಳಬಾರದೇ? ಜಮೀನಿನ ಬದಲು ನಿವೇಶನ ಕೊಡಲು ಕಷ್ಟವಿದ್ದರೆ ಜಮೀನಿನ ಮೌಲ್ಯ 60 ಕೋಟಿ.ರೂ.ಗಳನ್ನು ಕೊಟ್ಟುಬಿಡಲಿ. ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿರುವುದನ್ನು ಅವರೇ, ಮುಡಾದ ಸಭೆಯಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ. ಇಂಥ ಕಡೆಯೇ ನಿವೇಶನ ಕೊಡಿ ಎಂದು ನಾವು ಕೇಳಿರಲಿಲ್ಲ. 2021ರಲ್ಲಿ ನಿವೇಶನ ನೀಡಿದಾಗ ಬಿಜೆಪಿ ಅಧಿಕಾರದಲ್ಲಿತ್ತು. ಅವರೇ ನಿವೇಶನಗಳನ್ನು ಹಂಚಿ ಈಗ ಕಾನೂನುಬಾಹಿರ ಎಂದರೆ ಹೇಗೆ? ವಿಜಯನಗರ 3ನೇ ಅಥವಾ 4ನೇ ಹಂತದಲ್ಲೇ ನಿವೇಶನ ಕೊಡಿ ಎಂದು ನಾವೇನು ಕೇಳಲಿಲ್ಲ. ನಮಗೆ ಪರ್ಯಾಯವಾಗಿ 50:50 ಅನುಪಾತದಲ್ಲಿ ಕೊಡಲು ಅವರೇ ನಿಯಮ ಮಾಡಿದ್ದು, ಅದಕ್ಕೆ ನಾವು ಸರಿ ಅದನ್ನೇ ಕೊಡಿಯಪ್ಪ ಎಂದು ಹೇಳಿದ್ದೇವೆ. ಇದರಲ್ಲಿ ನಮ್ಮ ತಪ್ಪೇನಿದೆ?
ಮುಡಾ ನಿವೇಶನ ಹಂಚಿಕೆ ಕುರಿತಾದ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದೆ. ಮುಡಾ ನಿವೇಶನ ಹಂಚಿಕೆ ಕುರಿತು ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳೇ ಹೊರತು ಅಂಕಿಅಂಶಗಳ ಮೇಲೆ ಮಾಡಿರುವ ಆರೋಪಗಳಲ್ಲ. ಬಿಜೆಪಿಯವರಿಗೆ ಬೇರೇನೂ ವಿಷಯವಿಲ್ಲ. ಆರ್.ಎಸ್.ಎಸ್ ಹೇಳಿದಂತೆ ಮಾಡುತ್ತಾರೆ. ನಿವೇಶನ ಹಂಚಿಕೆಯಾಗಿದ್ದು ಬಿಜೆಪಿ ಕಾಲದಲ್ಲಿ, ಈಗ ಭ್ರಷ್ಟಾಚಾರ ನಡೆದಿದೆ ಎನ್ನುತ್ತಿರುವವರು ಬಿಜೆಪಿಯವರೇ. ಹಾಗಾದರೆ ಬಿಜೆಪಿ ಆರೋಪ ಮಾಡುತ್ತಿರುವುದು ಯಾರ ವಿರುದ್ಧ..? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.