ನವದೆಹಲಿ: ಶೀಘ್ರದಲ್ಲಿಯೇ ವಿಮಾನ ಮಾದರಿಯ ಬಸ್ ಗಳನ್ನು ರಸ್ತೆಗಿಳಿಸಲಾಗುವುದು. ಈ ಬಸ್ ಗಳ ಪ್ರಯಾಣ ದರ ಮಾಮೂಲಿ ಬಸ್ ಗಳಿಗಿಂತಲೂ ಶೇಕಡ 30ರಷ್ಟು ಕಡಿಮೆ ಇರಲಿದೆ. ಸಧ್ಯವೇ ನಾಗಪುರದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ನಾಗಪುರದಲ್ಲಿ 132 ಸೀಟ್ ಗಳ ವಿಮಾನ ಮಾದರಿಯ ಬಸ್ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಬಸ್ ಸಖಿಯರು ಕೂಡ ಇರಲಿದ್ದು, ಪ್ರಯಾಣಿಕರಿಗೆ ನೆರವು ನೀಡುತ್ತಾರೆ. ಹಣ್ಣು, ಜ್ಯೂಸ್, ಪ್ಯಾಕೆಟ್ ಫುಡ್ ಗಳನ್ನು ಬಸ್ ಹೋಸ್ಟೆಸ್ ಸರಬರಾಜು ಮಾಡಲಿದ್ದಾರೆ. ವಿಮಾನದಲ್ಲಿರುವಂತೆ ಸಕಲ ಸೌಲಭ್ಯಗಳು ಕೂಡ ಈ ಬಸ್ ಗಳಲ್ಲಿರಲಿದೆ.
ಇದು ನಿಸರ್ಗ ಸ್ನೇಹಿಯಾಗಿದ್ದು ಶೇಕಡ 60ರಷ್ಟು ವಿದ್ಯುತ್ ಮತ್ತು ಶೇಕಡ 40ರಷ್ಟು ಎಥೆನಾಲ್ ಬಳಕೆ ಮಾಡಲಾಗುವುದು. ಇದು ಮೂರು ಬಸ್ ಗಳ ಜೋಡಣೆ ಮಾಡಿದ ರೀತಿ ಇರುತ್ತದೆ. ಜೆಕ್ ಗಣರಾಜ್ಯದಿಂದ ಸ್ಪೂರ್ತಿ ಪಡೆದು ಈ ಬಸ್ ಸಂಚಾರ ಆರಂಭಿಸಲಾಗುತ್ತಿದೆ. ಸ್ಕೋಡಾ ಮತ್ತು ಟಾಟಾ ಸಹಭಾಗಿತ್ವದಿಂದ ಬಸ್ ಮಾದರಿ ರಚಿಸಲಾಗಿದೆ. ಡೀಸೆಲ್ ಬಸ್ ಗಳಿಗಿಂತಲೂ ಪ್ರಯಾಣದ ಶೇಕಡ 30ರಷ್ಟು ಕಡಿಮೆ ಇರುತ್ತದೆ. ಮಾಲಿನ್ಯ ಮುಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಈ ವಿಮಾನ ಮಾದರಿಯ ಬಸ್ ಸಂಚಾರ ಆರಂಭಿಸಲಾಗುತ್ತಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.