ಬೆಂಗಳೂರು: ಗುತ್ತಿಗೆದಾರರಿಗೆ ಬಾಕಿ ಇರುವ ಬಿಲ್ ಪಾವತಿಸದಿದ್ದರೆ ಜುಲೈ 8 ರಿಂದ ನಗರದಲ್ಲಿ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಬಿಬಿಎಂಪಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.
ತಮ್ಮ 9 ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಎರಡು ತಿಂಗಳಿಂದ ಐದಾರು ಬಾರಿ ಗುತ್ತಿಗೆದಾರರು ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿಯೂ ಗುತ್ತಿಗೆದಾರರ ಬೇಡಿಕೆ ಈಡೇರಿಸಲು ಸೂಚಿಸಲಾಗಿತ್ತು. ಆದರೂ, ಮುಖ್ಯ ಆಯುಕ್ತರು ಗುತ್ತಿಗೆದಾರರನ್ನು ಕಡೆಗಣಿಸಿದ್ದು, ಬೇಡಿಕೆಗಳನ್ನು ಈಡೇರಿಸಿಲ್ಲ. ಹೀಗಾಗಿ ಎಲ್ಲಾ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ವಾರ್ಡ್ ಕಾಮಗಾರಿ, ಮಳೆ ನೀರು ಕಾಲುವೆ, ರಸ್ತೆ, ವೈಟ್ ಟಾಪಿಂಗ್, ಕೆರೆ ಯೋಜನೆ, ತೋಟಗಾರಿಕೆ ವಿಭಾಗ ಸೇರಿ ಎಲ್ಲ ರೀತಿಯ ಕಾಮಗಾರಿ ಸ್ಥಗಿತಕ್ಕೆ ನಿರ್ಧರಿಸಿರುವುದಾಗಿ ಸಂಘದ ಅಧ್ಯಕ್ಷ ಜೆ.ಎಂ. ನಂದಕುಮಾರ್ ತಿಳಿಸಿದ್ದಾರೆ.
ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಾಮಗಾರಿ ಬಿಲ್ ಪಾವತಿ ಸಮಯದಲ್ಲಿ ತಡೆಹಿಡಿದ ಶೇಕಡ 25ರಷ್ಟು ಬಾಕಿ ಹಣ ಬಿಡುಗಡೆ ಮಾಡಬೇಕು. 24 ತಿಂಗಳಿಂದ ಕೈಗೊಂಡ ಕಾಮಗಾರಿಗಳಿಗೆ ಸುಮಾರು 1,600 ಕೋಟಿ ರೂ. ಪಾವತಿಸಬೇಕೆಂದು ಕನಿಷ್ಠ 12 ತಿಂಗಳ ಬಿಲ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.