ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್ ಗಾಗಿ ಬಿಗ್ ಫೈಟ್ ನಡೆದಿದ್ದು, ಟಿಕೆಟ್ ಆಕಾಂಕ್ಷಿಗಳ ಜೊತೆಗೆ ಸಚಿವ ಸತೀಶ ಜಾರಕಿಹೊಳಿ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿಯ ಪ್ರವಾಸಿ ಮಂದಿರದಲ್ಲಿ ಯಾಸೀರ್ ಖಾನ್ ಪಠಾಣ್, ಅಜ್ಜಂಪೀರ್ ಖಾದ್ರಿ, ಸೋಮಣ್ಣ ಬೇವಿನಮರದ, ರಾಜು ಕುನ್ನೂರ್, ಆರ್. ಶಂಕರ್ ಅವರೊಂದಿಗೆ ಸತೀಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ.
ಐಬಿಯಿಂದ ಸತೀಶ್ ಜಾರಕಿಹೊಳಿ ವಾಪಸ್ ಆಗುವಾಗ ಬಾಗಿಲಿನ ಗಾಜು ಪುಡಿ ಪುಡಿಯಾಗಿದೆ. ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಶಿಗ್ಗಾಂವಿ ಐಬಿಯಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಪಠಾಣ್ ಮತ್ತು ಖಾದ್ರಿ ಬೆಂಬಲಿಗರ ನಡುವೆ ಹೈಡ್ರಾಮಾ ನಡೆದಿದೆ.
ಇದರಿಂದ ಅಸಮಾಧಾನಗೊಂಡ ಸತೀಶ್ ಜಾರಕಿಹೊಳಿ ಟಿಕೆಟ್ ಆಕಾಂಕ್ಷಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಾವು ಶಿಗ್ಗಾಂವಿ ಉಪ ಚುನಾವಣೆ ಗೆಲ್ಲಬೇಕಿದೆ. ಹೀಗೆ ಕಚ್ಚಾಡಿಕೊಂಡು ಹೋದರೆ ಬಹಳ ಕಷ್ಟ ಆಗುತ್ತದೆ. ಇಡೀ ಸರ್ಕಾರವೇ ನಿಂತು ಉಪ ಚುನಾವಣೆ ನಡೆಸಲಿದೆ. ಇನ್ನೂ ಉಪಚುನಾವಣೆ ದಿನಾಂಕವೇ ಘೋಷಣೆಯಾಗಿಲ್ಲ. ಈಗಲೇ ನೀವು ಹೀಗೆ ಮಾಡಿದರೆ ಹೇಗೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದಿನ ಬೆಳವಣಿಗೆ ನನಗೆ ಬೇಸರ ತರಿಸಿದೆ. ಇಂತಹ ಬೆಳವಣಿಗೆಗಳಿಂದಲೇ ಇಲ್ಲಿ ಸೋಲುತ್ತಿದ್ದೇವೆ. ಅಶಿಸ್ತು ನಡೆಯುವುದಿಲ್ಲ. ಎಲ್ಲರೂ ಒಂದುಗೂಡಿ ಚುನಾವಣೆ ಎದುರಿಸಬೇಕು ಎಂದು ಆಕಾಂಕ್ಷಿಗಳಿಗೆ ತಾಕೀತು ಮಾಡಿದ್ದಾರೆ.