HomeKarnatakaಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಶೇ. 15 ರಷ್ಟು NRI ಕೋಟಾ: NMC ಗೆ ರಾಜ್ಯ ಸರ್ಕಾರ...

ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಶೇ. 15 ರಷ್ಟು NRI ಕೋಟಾ: NMC ಗೆ ರಾಜ್ಯ ಸರ್ಕಾರ ಪತ್ರ

ಬೆಂಗಳೂರು: ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ 2025 -26ನೇ ಶೈಕ್ಷಣಿಕ ಸಾಲಿನಿಂದ ಅನಿವಾಸಿ ಭಾರತೀಯ ಕೋಟಾ ಆರಂಭಿಸಲು ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಪತ್ರ ಬರೆಯಲಾಗಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್.ಎಂ.ಸಿ.) ಅಧ್ಯಕ್ಷರಿಗೆ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿರುವ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ 508 ಹೆಚ್ಚುವರಿ ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸುವ ಮೂಲಕ ಶೇ. 15ರಷ್ಟು ಎನ್.ಆರ್.ಐ. ಕೋಟಾ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.

22 ಸರ್ಕಾರಿ ವೈದ್ಯಕೀಯ ಕಾಲೇಜುಗಳು 2023 -24ನೇ ಸಾಲಿನಲ್ಲಿ 3450 ಸೀಟುಗಳ ಸಾಮರ್ಥ್ಯ ಹೊಂದಿವೆ. ಅದರಲ್ಲಿ ಶೇಕಡ 85ರಷ್ಟು(2929 ಸೀಟುಗಳು) ಕರ್ನಾಟಕ ಕೋಟಾ ಮತ್ತು ಶೇಕಡ 15 ರಷ್ಟು(521 ಸೀಟುಗಳು) ಅಖಿಲ ಭಾರತ ಕೋಟಾ ಸೀಟುಗಳಾಗಿವೆ. ಈಗಾಗಲೇ ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಪುದುಚೇರಿ, ರಾಜಸ್ಥಾನದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡ 7ರಿಂದ 15ರಷ್ಟು ಎನ್.ಆರ್.ಐ. ಸೀಟುಗಳನ್ನು ನೀಡಲಾಗಿದೆ. ಈ ರಾಜ್ಯಗಳು ಎನ್.ಆರ್.ಐ. ವಿದ್ಯಾರ್ಥಿಗಳಿಗೆ ವಾರ್ಷಿಕ 75,000 ಡಾಲರ್ ನಿಂದ ಒಂದು ಲಕ್ಷ ಡಾಲರ್ ಗೂ ಹೆಚ್ಚು ಶುಲ್ಕ ವಿಧಿಸುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್.ಆರ್.ಐ. ಕೋಟಾಕ್ಕೆ ಅನುಮತಿ ಇದ್ದು, ಪ್ರತಿ ವಿದ್ಯಾರ್ಥಿ ವಾರ್ಷಿಕ ಒಂದು ಕೋಟಿ ರೂ.ನಿಂದ 2.5 ಕೋಟಿ ರೂ. ಕೋರ್ಸ್ ಶುಲ್ಕ ಪಾವತಿಸಬೇಕಿದೆ. ಸರ್ಕಾರಿ ಕಾಲೇಜುಗಳಲ್ಲಿ ಎನ್.ಆರ್.ಐ. ಕೋಟಾ ಜಾರಿಯಾದರೆ ವಿದ್ಯಾರ್ಥಿಗೆ ವಾರ್ಷಿಕ 25 ಲಕ್ಷ ರೂಪಾಯಿ ಶುಲ್ಕ ನಿಗದಿಪಡಿಸಬಹುದು. ಇದರಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಮೊದಲ ವರ್ಷ 127 ಕೋಟಿ ರೂ.,  5ನೇ ವರ್ಷಕ್ಕೆ ಒಟ್ಟು 571 ಕೋಟಿ ರೂ. ಸಂದಾಯವಾಗಬಹುದು ಎಂದು ಹೇಳಲಾಗಿದೆ.

ಲಭ್ಯವಿರುವ ಸೀಟುಗಳೊಳಗೆ ಎನ್.ಆರ್.ಐ. ಕೋಟಾ ರಚಿಸುವುದು ಕಾರ್ಯ ಸಾಧ್ಯವಲ್ಲ. ಹಾಗೆ ಮಾಡುವುದರಿಂದ ಬಡವರು, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ಸೀಟು ಲಭ್ಯವಾಗುತ್ತದೆ. ಪೋಷಕರು, ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿರುವ ಸರ್ಕಾರಿ ಪಶು ವೈದ್ಯಕೀಯ, ಕೃಷಿ, ತೋಟಗಾರಿಕೆ ವಿವಿಗಳಯ ಶೇ. 15ರಷ್ಟು ಎನ್.ಆರ್.ಐ. ಕೋಟಾ ಹೊಂದಿವೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಶೇಕಡ 15ರಷ್ಟು ಎನ್.ಆರ್.ಐ. ಕೋಟಾ ಸೀಟುಗಳನ್ನು ಮಂಜೂರು ಮಾಡಬೇಕೆಂದು ಕೋರಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular