ಜೈಪುರ್: ನೀರಿನ ಮಡಕೆ ಮುಟ್ಟಿದ ಎಂಬ ಕಾರಣಕ್ಕೆ ಎಂಟು ವರ್ಷದ ದಲಿತ ಬಾಲಕನನ್ನು ಮನಬಂದಂತೆ ಥಳಿಸಲಾಗಿದೆ.
ಮರಕ್ಕೆ ಉಲ್ಟಾ ನೇತುಹಾಕಿ ಬಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ರಾಜಸ್ಥಾನದ ಬಾರ್ಮೇರ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನನ್ನು ಬಿಡಿಸಲು ಹೋದ ತಾಯಿ ಮತ್ತು ಅಜ್ಜಿಯ ಮೇಲೆಯೂ ಹಲ್ಲೆ ನಡೆಸಲಾಗಿದೆ.
ರಾಜಸ್ಥಾನದ ಬಾರ್ಮೇರ್ ಜಿಲ್ಲೆಯ ಭಾಕ್ರಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಆಟವಾಡಿಕೊಂಡಿದ್ದ ಬಾಲಕನನ್ನು ಕರೆದ ನರ್ನಾರಾಮ್ ಪ್ರಜಾಪತ್ ಮತ್ತು ದೇಮರಾಮ್ ಪ್ರಜಾಪತ್ ಎಂಬುವವರು ಶೌಚಾಲಯ ತೊಳೆದು ಅಲ್ಲಿದ್ದ ಕಸವನ್ನು ತೆಗೆಯಲು ಹೇಳಿದ್ದಾರೆ. ಆಗ ಬಾಲಕ ಶೌಚಾಲಯ ಸ್ವಚ್ಛಗೊಳಿಸಿ ಕಸ ತೆಗೆದು ಹಾಕಿ ಬಂದು ಕುಡಿಯಲು ನೀರು ಕೇಳಿದ್ದಾನೆ. ಅಲ್ಲಿಯೇ ಇದ್ದ ನೀರಿನ ಮಡಕೆಯನ್ನು ಮುಟ್ಟಿದ್ದಾನೆ. ಇದರಿಂದ ಕೋಪಗೊಂಡ ನರ್ನಾರಾಮ್ ಪ್ರಜಾಪತ್ ಸಮೀಪದಲ್ಲಿದ್ದ ತನ್ನ ಮನೆಗೆ ಬಾಲಕನನ್ನು ಎಳೆದೊಯ್ದು ಮರಕ್ಕೆ ಉಲ್ಟಾ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾನೆ.
ಬಾಲಕನ ರಕ್ಷಣೆಗಾಗಿ ಅಲ್ಲಿಗೆ ಬಂದಿದ್ದ ಬಾಲಕನ ಸಂಬಂಧಿಕರು ಮತ್ತು ತಾಯಿ, ಅಜ್ಜಿಯ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಸಂಬಂಧಿಕರಲ್ಲಿ ಒಬ್ಬ ಘಟನೆಯ ವಿಡಿಯೋ ಮಾಡಿಕೊಂಡಾಗ ಹಲ್ಲೆ ಮಾಡುವುದನ್ನು ನಿಲ್ಲಿಸಿದ್ದಾನೆ. ಪೊಲೀಸರಿಗೆ ದೂರು ನೀಡಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.