8 ನೇ ತರಗತಿ ಓದಿದ್ದವನಿಂದ 13 ಕೋಟಿ ರೂ. ದೋಖಾ! ಯುವಕನ ‘ಮನಿ ಹೈಸ್ಟ್’ ಕಥೆ

ಬರೀ 8ನೇ ತರಗತಿವರೆಗೆ ಓದಿದ್ದರೂ, ವಿಜಯ್‌ಕುಮಾರ್ ಎಂಬ 30 ವರ್ಷದ ಯುವಕನೊಬ್ಬ ಕರ್ನಾಟಕದ ಅತಿದೊಡ್ಡ ಬ್ಯಾಂಕ್ ದರೋಡೆಯನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದ. ಬರೋಬ್ಬರಿ 13 ಕೋಟಿ ರೂಪಾಯಿ ಮೌಲ್ಯದ 17.7 ಕೆಜಿ ಚಿನ್ನವನ್ನು ದೋಚಿ ಪೊಲೀಸರಿಗೂ ಸವಾಲೆಸೆದಿದ್ದ. ಆದರೆ ಐದು ತಿಂಗಳ ಸುದೀರ್ಘ ಕಾರ್ಯಾಚರಣೆಯ ನಂತರ ಪೊಲೀಸರು ಈ ‘ಮನಿ ಹೈಸ್ಟ್’ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ನ್ಯಾಮತಿಯ SBI ಬ್ಯಾಂಕ್‌ನಲ್ಲಿ 2024ರ ಅಕ್ಟೋಬರ್ 28ರಂದು ಈ ದರೋಡೆ ನಡೆದಿತ್ತು. ವಿಜಯ್‌ಕುಮಾರ್ ಹಾಗೂ ಆತನ ಐವರು ಸಹಚರರನ್ನು ಪೊಲೀಸರು ಮಧುರೈನ ಉಸಲಂಪಟ್ಟಿಯ ಬಾವಿಯೊಂದರಲ್ಲಿ ಬಂಧಿಸಿದ್ದಾರೆ. ಅಚ್ಚರಿಯೆಂದರೆ, ಇದೇ ಉಸಲಂಪಟ್ಟಿ 90ರ ದಶಕದ ಸೂಪರ್‌ಹಿಟ್ ಸಿನಿಮಾ ‘ಜೆಂಟಲ್‌ಮನ್’ನ ಹಾಡಿನಲ್ಲಿ ಉಲ್ಲೇಖವಾಗಿತ್ತು !

ಬಡತನದಿಂದ ಬೇಸತ್ತಿದ್ದ ವಿಜಯ್, ರಾಣಾ ರೀತಿಯಲ್ಲಿ ದೊಡ್ಡ ಕಳ್ಳನಾಗಲು ಬಯಸಿದ್ದ ಎನ್ನಲಾಗಿದೆ. ಆತ ‘ಮನಿ ಹೈಸ್ಟ್’ ಮತ್ತು ‘ತೀರನ್’ ಸಿನಿಮಾಗಳನ್ನು ಹಲವು ಬಾರಿ ನೋಡಿ ದರೋಡೆಯ ಪ್ಲಾನ್ ಮಾಡಿದ್ದ. ನ್ಯಾಮತಿಯಲ್ಲಿದ್ದ ತನ್ನ ಸಿಹಿ ಅಂಗಡಿಯನ್ನು ದೊಡ್ಡದು ಮಾಡಬೇಕೆಂಬ ಕನಸು ಮತ್ತು ಸಾಲ ನಿರಾಕರಣೆಯ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದ.

ವಿಜಯ್‌ನ ಬುದ್ಧಿವಂತಿಕೆಗೆ ಪೊಲೀಸರೇ ಬೆರಗಾಗಿದ್ದಾರೆ. ದರೋಡೆ ನಡೆದ ಬ್ಯಾಂಕಿನ ಭದ್ರತಾ ವ್ಯವಸ್ಥೆಯಲ್ಲಿದ್ದ ಲೋಪಗಳನ್ನು ಅರಿತುಕೊಂಡಿದ್ದ. ಅಷ್ಟೇ ಅಲ್ಲ, ಪೊಲೀಸರಿಗೆ ಸುಳಿವು ಸಿಗದಂತೆ ಮೆಣಸಿನ ಪುಡಿ ಎರಚಿ, ಕದ್ದ ಚಿನ್ನವನ್ನು ಬೇಸಿಗೆಯಲ್ಲೂ ನೀರಿಲ್ಲದ ಬಾವಿಯಲ್ಲಿ ಬಚ್ಚಿಟ್ಟಿದ್ದ. ಉಳಿದ ಐವರು ಕಳ್ಳರು ವಿಜಯ್‌ನನ್ನು ಕುರುಡಾಗಿ ನಂಬಿದ್ದರು.

ಬಂಧನದ ನಂತರ ವಿಜಯ್ ನೀಡಿದ ಮಾಹಿತಿಯಂತೆ, ಬಾವಿಯಿಂದ 15 ಕೆಜಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ದರೋಡೆಯಲ್ಲಿ ಮಹಿಳೆಯರ ತಾಳಿ ಮತ್ತು ಮಂಗಳಸೂತ್ರಗಳೂ ಸೇರಿದ್ದವು ಎಂಬುದು ದುಃಖದ ಸಂಗತಿ. ಕೇವಲ 8ನೇ ತರಗತಿ ಓದಿದ್ದ ಈ ಕಳ್ಳ, ತನ್ನ ಬುದ್ದಿವಂತಿಕೆಯಿಂದ ಪೊಲೀಸರಿಗೆ ತಿಂಗಳಾನುಗಟ್ಟಲೆ ಚಳ್ಳೆಹಣ್ಣು ತಿನ್ನಿಸಿದ್ದ!

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read