ಡೊಮಿನಿಕನ್ ಗಣರಾಜ್ಯದ ರಾಜಧಾನಿ ಸ್ಯಾಂಟೋ ಡೊಮಿಂಗೊದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ದುರಂತದಲ್ಲಿ ಕನಿಷ್ಠ 79 ಜನರು ಸಾವನ್ನಪ್ಪಿದ್ದಾರೆ ಮತ್ತು 160ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಗರದ ಜನಪ್ರಿಯ ನೈಟ್‌ಕ್ಲಬ್‌ನಲ್ಲಿ ಮೆರೆಂಗ್ಯೂ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಛಾವಣಿ ಕುಸಿದು ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಅಗ್ನಿಶಾಮಕ ಸಿಬ್ಬಂದಿಗಳು ಕೊರೆಯುವ ಯಂತ್ರಗಳು ಮತ್ತು ಮರದ ಹಲಗೆಗಳನ್ನು ಬಳಸಿ ಬೃಹತ್ ಕಾಂಕ್ರೀಟ್ ತುಂಡುಗಳನ್ನು ತೆರವುಗೊಳಿಸುತ್ತಿರುವುದು ಕಂಡುಬಂದಿದೆ. ದುರಂತ ಸಂಭವಿಸಿದ 12 ಗಂಟೆಗಳ ನಂತರವೂ ರಕ್ಷಣಾ ಕಾರ್ಯ ಮುಂದುವರೆದಿದ್ದು, ಅವಶೇಷಗಳಡಿ ಬದುಕುಳಿದಿರುವವರನ್ನು ಪತ್ತೆಹಚ್ಚಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರದ ನಿರ್ದೇಶಕ ಜುವಾನ್ ಮ್ಯಾನುಯೆಲ್ ಮೆಂಡೆಜ್ ತಿಳಿಸಿದ್ದಾರೆ. ಅಲ್ಲದೆ, ಕಟ್ಟಡದ ಅವಶೇಷಗಳಡಿ ಕೆಲವೊಂದು ಸದ್ದುಗಳು ಕೇಳಿಬಂದಿದ್ದು, ಆ ಮೂರು ಪ್ರದೇಶಗಳಿಗೆ ರಕ್ಷಣಾ ಸಿಬ್ಬಂದಿ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಈ ದುರಂತದಲ್ಲಿ ಮೇಜರ್ ಲೀಗ್ ಬೇಸ್‌ಬಾಲ್‌ನ ಖ್ಯಾತ ಆಟಗಾರ ನೆಲ್ಸನ್ ಕ್ರೂಜ್ ಅವರ ಸಹೋದರಿ ಮತ್ತು ಮಾಂಟೆಕ್ರಿಸ್ಟಿ ಪ್ರಾಂತ್ಯದ ಗವರ್ನರ್ ಆಗಿದ್ದ ನೆಲ್ಸಿ ಕ್ರೂಜ್ ಕೂಡ ಮೃತಪಟ್ಟಿದ್ದಾರೆ. ಛಾವಣಿ ಕುಸಿದ ನಂತರ ತಾನು ಅವಶೇಷಗಳಡಿ ಸಿಲುಕಿಕೊಂಡಿರುವುದಾಗಿ ಅವರು ಅಧ್ಯಕ್ಷ ಲೂಯಿಸ್ ಅಬಿನಾದರ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತದ ಸುದ್ದಿ ತಿಳಿದು ಕಣ್ಣೀರಿಟ್ಟ ಪ್ರಥಮ ಮಹಿಳೆ ರಾಕ್ವೆಲ್ ಅರ್ಬಾಜೆ, “ಇದು ಅತೀ ದೊಡ್ಡ ದುರಂತ” ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಡೊಮಿನಿಕನ್ ಗಣರಾಜ್ಯದ ವೃತ್ತಿಪರ ಬೇಸ್‌ಬಾಲ್ ಲೀಗ್ ಖ್ಯಾತ ಎಂಎಲ್‌ಬಿ ಪಿಚರ್ ಆಕ್ಟಾವಿಯೊ ಡೊಟೆಲ್ ಕೂಡ ಮೃತಪಟ್ಟಿದ್ದಾರೆ ಎಂದು ಖಚಿತಪಡಿಸಿದೆ. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಇದರ ಜೊತೆಗೆ ಡೊಮಿನಿಕನ್ ಬೇಸ್‌ಬಾಲ್ ಆಟಗಾರ ಟೋನಿ ಎನ್ರಿಕ್ ಬ್ಲಾಂಕೊ ಕ್ಯಾಬ್ರೆರಾ ಕೂಡ ಈ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಲೀಗ್ ವಕ್ತಾರ ಸಟೋಸ್ಕಿ ಟೆರೆರೊ ತಿಳಿಸಿದ್ದಾರೆ.
ಮೊದಲಿಗೆ ಮೆರೆಂಗ್ಯೂ ಗಾಯಕ ರೂಬಿ ಪೆರೆಜ್ ಅವರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದ್ದರೂ, ನಂತರ ತುರ್ತು ಕಾರ್ಯಾಚರಣೆ ಕೇಂದ್ರದ ನಿರ್ದೇಶಕ ಜುವಾನ್ ಮ್ಯಾನುಯೆಲ್ ಮೆಂಡೆಜ್ ಅವರು ಪೆರೆಜ್ ಇನ್ನೂ ನಾಪತ್ತೆಯಾಗಿದ್ದಾರೆ ಮತ್ತು ಅವರನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ನಿರಂತರವಾಗಿ ಶೋಧ ನಡೆಸುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನೈಟ್‌ಕ್ಲಬ್ ಆಡಳಿತ ಮಂಡಳಿ, ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಕ್ಲಬ್‌ನ ಮಾಲೀಕ ಆಂಟೋನಿಯೊ ಎಸ್ಪೈಲಾಟ್ ಅವರು ಘಟನೆ ನಡೆದ ಸಮಯದಲ್ಲಿ ದೇಶದಲ್ಲಿ ಇರಲಿಲ್ಲ ಮತ್ತು ಮಂಗಳವಾರ ತಡರಾತ್ರಿ ಆಗಮಿಸಿದ್ದಾರೆ ಎಂದು ಕ್ಲಬ್ ತಿಳಿಸಿದೆ. “ಈ ಘಟನೆಯಿಂದಾದ ನೋವನ್ನು ವ್ಯಕ್ತಪಡಿಸಲು ಪದಗಳಿಲ್ಲ. ಇದು ಎಲ್ಲರಿಗೂ ಆಘಾತಕಾರಿ” ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷ ಲೂಯಿಸ್ ಅಬಿನಾದರ್ ಅವರು ಟ್ವೀಟ್ ಮಾಡಿದ್ದು, ಸಂತ್ರಸ್ತರಿಗೆ ಸಹಾಯ ಮಾಡಲು ಎಲ್ಲಾ ರಕ್ಷಣಾ ಸಂಸ್ಥೆಗಳು ಅವಿರತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ. “ಜೆಟ್ ಸೆಟ್ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ದುರಂತಕ್ಕೆ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಘಟನೆ ನಡೆದ ಕ್ಷಣದಿಂದಲೂ ನಾವು ನಿರಂತರವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ. ಅಲ್ಲದೆ, ಅಧ್ಯಕ್ಷರು ದುರಂತ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖಿತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. “ದೇವರು ಇನ್ನಷ್ಟು ಜನರನ್ನು ಜೀವಂತವಾಗಿ ರಕ್ಷಿಸುತ್ತಾನೆಂಬ ನಂಬಿಕೆ ನಮಗಿದೆ” ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.