ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಕಾರ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇವ ಪೊಲೀಸ್ ಠಾಣೆ ವ್ಯಾಪ್ತಿಯ ಕುಟ್ಲುಪುರ್ ಗ್ರಾಮದ ಬಳಿಯ ಕಲ್ಯಾಣಿ ನದಿಯ ಸೇತುವೆಯ ಮೇಲೆ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮೃತರೆಲ್ಲರೂ ಕಾರಿನ ಪ್ರಯಾಣಿಕರಾಗಿದ್ದು, ಫತೇಪುರ್ ಪಟ್ಟಣದ ನಿವಾಸಿಗಳಾಗಿದ್ದಾರೆ.
ಡಿಕ್ಕಿಯ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ನಂಬರ್ ಪ್ಲೇಟ್ ಇಲ್ಲದ ಮತ್ತು ಹೊಸದಾಗಿ ಕಾಣುತ್ತಿದ್ದ ಕಾರ್, ಕ್ರೇನ್ ಬಳಸಿ ರಸ್ತೆಯಿಂದ ತೆಗೆಯುವಷ್ಟು ನಜ್ಜುಗುಜ್ಜಾಗಿತ್ತು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಗಾಯಾಳುಗಳನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಶಾಂಕ್ ತ್ರಿಪಾಠಿ ತಿಳಿಸಿದ್ದಾರೆ.
ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಕಾರ್ ಟ್ರಕ್ನ ಲೇನ್ಗೆ ಪ್ರವೇಶಿಸಿದ್ದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ತ್ರಿಪಾಠಿ ಹೇಳಿದರು.
ಕಾರಿನಲ್ಲಿ ಎಂಟು ಪ್ರಯಾಣಿಕರಿದ್ದರು. ಐದು ಪುರುಷರು ಮತ್ತು ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಇತರ ಇಬ್ಬರು ಗಾಯಗೊಂಡಿದ್ದಾರೆ. ಪ್ರಯಾಣಿಕರು ಹೊರರಾಜ್ಯ ಪ್ರವಾಸಕ್ಕಾಗಿ ಕಾರನ್ನು ಬಾಡಿಗೆಗೆ ಪಡೆದು ಫತೇಪುರಕ್ಕೆ ಹಿಂತಿರುಗುತ್ತಿದ್ದರು ಎಂದು ಎಸ್ಪಿ ವಿಜಯವರ್ಗೀಯ ಹೇಳಿದ್ದಾರೆ.
