ವಿಜಯನಗರ: 5.25 ಕೋಟಿ ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಪ್ರಕರಣ ಭೇದಿಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಕೃಷ್ಣಪ್ಪ, ಹೊಸಲಿಂಗಾಪುರದ ರವಿ ಗೋಸಂಗಿ, ವಿಜಯನಗರ ಜಿಲ್ಲೆ ಹೊಸಪೇಟೆಯ ಅಜಯ್, ರಿಯಾಜ್, ಯೋಗರಾಜ್ ಸಿಂಗ್ ಮತ್ತು ಹುಲಿಗೆಮ್ಮ ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಜೀರಿಗನೂರು ಗ್ರಾಮದವರಾದ ಹೊಸಪೇಟೆ ನಗರದ ಕೌಲ್ ಪೇಟೆ ನಿವಾಸಿ ಕೆ. ಗಂಗಾಧರ ಸೆಪ್ಟೆಂಬರ್ 28ರಂದು ಎಲ್ಐಸಿ ಕಾಲುವೆಯಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿತ್ತು. ಅವರ ಪತ್ನಿ ಶಾರದಮ್ಮ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡ ಸಂದರ್ಭದಲ್ಲಿ ವಿಮೆ ಹಣ ಪಡೆಯಲು ಕೊಲೆ ಮಾಡಿರುವುದು ಬಯಲಾಗಿದೆ.
ಗಂಗಾಧರ್ ಅವರಿಗೆ ಅನಾರೋಗ್ಯ, ಆರ್ಥಿಕ ಸಂಕಷ್ಟವಿತ್ತು. ಅವರ ಪರಿಸ್ಥಿತಿಯ ಲಾಭ ಪಡೆಯಲು ಮುಂದಾದ ಆರು ಮಂದಿ ಗಂಗಾಧರ ಅವರಿಗೆ ಮದುವೆಯಾಗಿದ್ದರೂ ಬೇರೊಬ್ಬ ಮಹಿಳೆಯನ್ನು ಪತ್ನಿ ಎಂದು ನಮೂದಿಸಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಿದ್ದರು.
ಗಂಗಾಧರನ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ನಕಲಿ ನಾಮಿನಿ ಸೃಷ್ಟಿಸಿದ್ದರು. ವಿವಿಧ ವಿಮಾ ಕಂಪನಿಗಳಲ್ಲಿ 5.25 ಕೋಟಿ ಅಪಘಾತ ವಿಮೆ ಇತರೆ ವಿಮೆ ಸೇರಿ ಆರು ಪಾಲಿಸಿಗಳನ್ನು ಮಾಡಿಸಿ ಆರೋಪಿಗಳೇ ಕಂತಿನ ಹಣ ಕಟ್ಟಿದ್ದರು. ಆದರೆ, ಗಂಗಾಧರ ಬೇಗನೆ ಮೃತಪಡದ ಕಾರಣ ಕೆಲವು ಪಾಲಿಸಿಗಳು ತಿರಸ್ಕೃತಗೊಂಡಿದ್ದವು. ಹೀಗಾಗಿ ಅಪಘಾತ ವಿಮೆ ಪಾಲಿಸಿಯ ಹಣ ಪಡೆಯಲು ಆತನನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದರು.
ಗಂಗಾವತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಕೃಷ್ಣಪ್ಪ, ಆಕ್ಸಿಸ್ ಬ್ಯಾಂಕ್ ಸೀನಿಯರ್ ಬ್ಯುಸಿನೆಸ್ ಸೇಲ್ಸ್ ಮ್ಯಾನೇಜರ್ ಯೋಗರಾಜ್ ಸಿಂಗ್ ಸೇರಿ 6 ಮಂದಿ ಬಂಧಿತರಾಗಿದ್ದಾರೆ.