ತುಮಕೂರು: ಪತ್ರಕರ್ತರ 39ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮನುಸ್ಮೃತಿ ಓದಲು ಹೇಳಿದ ಪ್ರಸಂಗ ನಡೆಯಿತು.
ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಸಮಾಜದಲ್ಲಿರುವ ಜಾತಿ ತಾರತಮ್ಯವನ್ನು ಉಲ್ಲೇಖಿಸಿ ಮಾತನಾಡುವಾಗ ಮೇಲು “ಜಾತಿ-ಕೆಳ ಜಾತಿ” ಎನ್ನುವ ಪದ ಬಳಸಿದರು. ಈ ವೇಳೆ ಸಚಿವ ರಾಜಣ್ಣ ಅವರು ಮೇಲುಜಾತಿ-ಕೆಳಜಾತಿ ಎನ್ನುವ ಬದಲಿಗೆ ಮುಂದುವರೆದವರು, ಹಿಂದುಳಿದವರು ಎಂದು ಹೇಳಬಹುದು ಎಂದರು.
ಇದಕ್ಕೆ ಆಕ್ಷೇಪಿಸಿದ ಸಿಎಂ, ಜಾತಿ ಅನ್ನುವುದು ಈ ಸಮಾಜದ ವಾಸ್ತವ. ನೀನು ಮನುಸ್ಮೃತಿ ಓದಿದರೆ ಈ ಬಗ್ಗೆ ಇನ್ನಷ್ಟು ಸ್ಪಷ್ಟವಾಗುತ್ತದೆ. ಜಾತಿಯ ತಾರತಮ್ಯ ಎಷ್ಟು ಭೀಕರವಾಗಿದೆ ಎಂದು ಗೊತ್ತಾಗಬೇಕಾದರೆ ಅದಕ್ಕೆ ಮನುಸ್ಮೃತಿ ಓದು ಎಂದರು.
ಈ ಬಗ್ಗೆ ಕೆಲ ಕ್ಷಣ ಇಬ್ಬರ ನಡುವೆ ಚರ್ಚೆ ನಡೆಯಿತು. ಬಳಿಕ, ಮುಖ್ಯಮಂತ್ರಿಗಳು “ನಾನು ಮೇಲು ಜಾತಿ-ಕೆಳ ಜಾತಿ ಅಂತಲೇ ಬಳಸ್ತೀನಿ. ಇದು ನನ್ನ ಸ್ವಾತಂತ್ರ್ಯ, ನೀವು ಹಿಂದುಳಿದವರು-ಮುಂದುವರೆದವರು ಅಂತಲೇ ಬಳಸಿ ಎಂದು ನಗೆಚಟಾಕೆ ಹಾರಿಸಿ ಭಾಷಣ ಮುಂದುವರೆಸಿದರು.
ವರದಿಗಾರಿಕೆ ವೃತ್ತಿಪರವಾಗಿದ್ದಾಗ ಸಮಾಜದ ಪರವಾಗಿರುತ್ತದೆ. ಪತ್ರಿಕಾ ವೃತ್ತಿ ಉದ್ಯಮ ಆದ ಕೂಡಲೇ ಇದರ ಉದ್ದೇಶಗಳು ಬದಲಾಗುತ್ತವೆ.
ವಸ್ತು ಸ್ಥಿತಿ ಜೊತೆಗೆ ಮೌಲ್ಯಧಾರಿತ ಸುದ್ದಿ ಇಂದಿನ ಅಗತ್ಯ. ಊಹಾ (ಕಲ್ಪಿತ) ಪತ್ರಿಕೋದ್ಯಮ ಅಪಾಯಕಾರಿ ಎಂದು ಸಿ.ಎಂ. ಸಿದ್ದರಾಮಯ್ಯ ಅವರು ಕರೆ ನೀಡಿದರು.
ಸಂವಿಧಾನದ ಆಶಯಗಳನ್ನು ಈಡೇರಿಸುವುದೇ ಪತ್ರಿಕಾ ವೃತ್ತಿಯ ಕರ್ತವ್ಯ. ಧ್ವನಿ ಇಲ್ಲದವರ ಪರವಾಗಿ ವೃತ್ತಿ ಇದ್ದಾಗ ಸಮಾಜಕ್ಕೆ ಅನುಕೂಲ. ಸಮಾಜದಲ್ಲಿರುವ ಮೇಲು, ಕೆಳ ಜಾತಿಗಳ ನಡುವಿನ ತಾರತಮ್ಯ ಮತ್ತು ಅಸಮಾನತೆ ಕೊನೆಯಾಗುವ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸಿ ಎಂದು ಕರೆ ನೀಡಿದರು.