ಬೆಂಗಳೂರು: 2026ನೇ ಸಾಲಿಗೆ 20 ಸಾರ್ವತ್ರಿಕ ರಜಾ ದಿನಗಳನ್ನು ಗೊತ್ತುಪಡಿಸಿ ಅಧಿಸೂಚನೆ ಹೊರಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಪ್ರತಿ ತಿಂಗಳ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರ ರಜೆಯ ಜೊತೆಗೆ 20 ಸಾರ್ವತ್ರಿಕ ರಜೆ, 21ಪರಿಮಿತ ರಜೆ ನಿಗದಿಪಡಿಸಲಾಗಿದೆ.
ಫೆಬ್ರವರಿ 15 ಮಹಾಶಿವರಾತ್ರಿ, ಅಕ್ಟೋಬರ್ 25 ಮಹರ್ಷಿ ವಾಲ್ಮೀಕಿ ಜಯಂತಿ, ನವೆಂಬರ್ 1 ಕನ್ನಡ ರಾಜ್ಯೋತ್ಸವ, ನವೆಂಬರ್ 8 ನರಕ ಚತುರ್ದಶಿ ಹಬ್ಬ ಭಾನುವಾರ ಬಂದಿದ್ದರೆ, ಮಹಾಲಯ ಅಮಾವಾಸ್ಯೆ ಅಕ್ಟೋಬರ್ 10ರ ಎರಡನೇ ಶನಿವಾರ ಬಂದಿದೆ.
ಈ ಪಟ್ಟಿಯಲ್ಲಿರುವಂತೆ ಮುಸ್ಲಿಮರ ಹಬ್ಬಗಳು ನಿಗದಿತ ದಿನಾಂಕದಂದು ಆಚರಣೆಯಾಗದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಂ ಸಮುದಾಯದವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನ ರಜೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸೆಪ್ಟೆಂಬರ್ 3ರಂದು ಕೈಲ್ ಮುಹೂರ್ತ, ಅಕ್ಟೋಬರ್ 18ರಂದು ತುಲಾ ಸಕ್ರಮಣ, ನವೆಂಬರ್ 28ರಂದು ಹುತ್ತರಿ ಹಬ್ಬ ಆಚರಿಸಲು ಕೊಡಗು ಜಿಲ್ಲೆಗಷ್ಟೇ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಶಿಕ್ಷಣ ಇಲಾಖೆಗೆ ಸಂಬಂಧಿಸಿದ ರಜೆಗಳಿಗೆ ಅನ್ವಯವಾಗುವಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಲಿದ್ದಾರೆ.
ಸಾರ್ವತ್ರಿಕ ರಜಾ ದಿನಗಳ ಜೊತೆಗೆ ಸರ್ಕಾರಿ ನೌಕರರು ಎರಡು ದಿನಗಳಿಗೆ ಮೀರದಂತೆ 2026 ನೇ ಸಾಲಿನ ವರ್ಷಕ್ಕೆ ಘೋಷಿಸಿದ ಪರಿಮಿತ ರಜೆಯನ್ನು ಪೂರ್ವ ಅನುಮತಿ ಪಡೆದು ಬಳಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರ ಇರುವ ಅಧಿಕಾರಿಗಳು ಮಂಜೂರಾತಿ ನೀಡಬೇಕೆಂದು ಸೂಚಿಸಲಾಗಿದೆ.
