ಚಿತ್ರದುರ್ಗ: ಮದುವೆ ಊಟ ಸೇವಿಸಿದ್ದ 150ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾದ ಘಟನೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ಮಲ್ಲಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಲ್ಲಿಹಳ್ಳಿ ಗ್ರಾಮದ ನಿವಾಸಿಯಾಗಿರುವ ಯುವಕನ ಮದುವೆ ಭಾನುವಾರ ಗವಿರಂಗಾಪುರ ಬೆಟ್ಟದಲ್ಲಿ ನಡೆದಿದೆ. ಮದುವೆಗೆ ಬಂದಿದ್ದವರಿಗೆ ಸೋಮವಾರ ಬೆಳಗ್ಗೆಯಿಂದ ಹೊಟ್ಟೆ ನೋವು, ವಾಂತಿ, ಭೇದಿ, ಜ್ವರ ಕಾಣಿಸಿಕೊಂಡಿದೆ. ಬೆಳಗಾಗುತ್ತಿದ್ದಂತೆ ತೀವ್ರ ಅಸ್ವಸ್ಥರಾದವರು ಒಬ್ಬೊಬ್ಬರಾಗಿಯೇ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಬೆಡ್ ಗಳೆಲ್ಲಾ ಭರ್ತಿಯಾಗಿವೆ.
ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದ ಕಾರಣ ಮಲ್ಲಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಗೂಳಿಹಳ್ಳಿ, ಸುಡಗಾಡನ ಪಾಳ್ಯ ಗ್ರಾಮಗಳಲ್ಲಿಯೇ ಚಿಕಿತ್ಸಾ ಶಿಬಿರ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆ ಮನೆಯಲ್ಲಿನ ಊಟ ಮತ್ತು ನೀರಿನ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ರಾಘವೇಂದ್ರ ಪ್ರಸಾದ್ ತಿಳಿಸಿದ್ದಾರೆ.